Tuesday 8 January 2013

ಸಂಜೆ

ದೂರದಂಚಿನಲಿ ಭಾನುವಿನ ಅಸ್ತಿತ್ವದ ಯುದ್ಧಕೆ,


ಅವನಗಲಿಕೆಯಿಂದಾದ ಭೂಮಿಯ ತಳಮಳಕೆ,


ಸಾಕ್ಷಿಯಾಯಿತು ಮೇಘದ ಪಯಣ,


ಮಿಲನದ ಗುರ್ತಿಗೆ ಸಂಜೆಯ ಹೊಂಗಿರಣ.




ನಿನ್ನ ಕಂಗಳಿಂದ ತೋರಿಸೆನಗೆ ಜಗದ ಬೆರಗು,


ಕೊಡು ಎನಗೆ ನಿನ್ನ ಶಬ್ದದ ಧ್ವನಿ,


ನನ್ನ ನಡಿಗೆಗೆ ದಾರಿ ನೀನಾಗು,


ಆವರಿಸಿ ಮನದ ತುಂಬಾ, ನಾನಾಗು


ಆಗಿರುವೆ ನೀನಾಗಲೇ ನಾನು!

Friday 8 January 2010

ಪ್ರಯತ್ನ..

ಡಾ| ಕುಮಾರ್ ವಿಶ್ವಾಸ್ ಹಿಂದಿಯ ಪ್ರಸಿದ್ಧ ಕವಿಯಲ್ಲೊಬ್ಬರು. ಇವರ ಕವಿತೆಗಳನ್ನು ಪರಿಚಯಿಸಿದ್ದು ಲಂಡನ್ನಿನ ಗೆಳೆಯ ಇಶಾನ್ ಮಿಶ್ರ. ಇವರ ಕೆಲವೇ ಕವಿತೆಗಳನ್ನು ಯೂ ಟ್ಯೂಬ್ ನಲ್ಲಿ ಕೇಳಿದ್ದು, ಅದರ ಅನುವಾದದ ಪ್ರಯತ್ನ :)


ಹುಚ್ಚನಂತೆ ಅಲೆಮಾರಿಯಾದರೂ
ಭೂಮಿಯ ತುಡಿತ ಮೋಡಕ್ಕಷ್ಟೆ ತಿಳಿವಂತೆ
ವಿರಹದ ವೇದನೆ ತಿಳಿವುದು
ನಮ್ಮಿಬ್ಬರ ಮನಸ್ಸಿಗಷ್ಟೇ...


ಪ್ರೀತಿ ಎಂಬ ಮಧುರ ಯಾತನೆಗೆ
ಮೀರಾಳೂ ಬಲಿ, ರಾಧೆಯೂ ಕೂಡ, ನಾವೇನು ಹೊರತೆ?
ಎಲ್ಲರೂ ತಿಳಿದಂತೆ ನೀನೂ ತಿಳಿದರೆ ಇವು ಕಣ್ಣೀರು,
ಮಧುರ ಯಾತನೆ ಅರ್ಥವಾದರೆ ಇವು ಮುತ್ತು..


ಪ್ರೀತಿಯ ಮುತ್ತುಗಳೆಂದು ತಿಳಿದಿದೆ, ಆದರೆ ಅಳಲಾರೆ,
ಕುಡಿಯಲಾರೆ ನನ್ನೆದೆಯಲ್ಲಿನ ಪ್ರೀತಿ ಸಾಗರದಿಂದ,
ನೀ ದೂರವಾಗಿರಬಹುದು, ದೂರವಾಗದು ಈ ಭಾವ,
ನನ್ನವಳಾಗದವಳು, ಆಗೆ ನೀ ಯಾರವಳೂ!!


ದುಂಬಿ ಹೂವನರಸಿ ಸರಸಿದರೇನು ಆಶ್ಚರ್ಯ?
ನನ್ನೀ ಮನದಲ್ಲಿ ಆಸೆ ಮೂಡಿದರೇನು ಆಶ್ಚರ್ಯ?
ಕೇಳುತಿದ್ದೆ ಪ್ರೀತಿಯ ಕತೆಗಳನ್ನ ತವಕದಿಂದ,
ಕತೆಗಳನ್ನ ವಾಸ್ತವಿಸಿದರೆ ಆಶ್ಚರ್ಯ!!!


Wednesday 23 December 2009

ಬೆಡಗು




ಮೋಡವಿರದೆ ಸೂರ್ಯನ ಇರುವಿಕೆಯೇ?
ಅವನ ಶಾಖವಿಲ್ಲದೆ ಮೋಡದಿಂದ ಮಳೆ ಸಾಧ್ಯವೇ?
ಕಿರಣಗಳಿಲ್ಲದೆ ಬಾನಿನನಲ್ಲಿ ಚಿತ್ತಾರವಿಲ್ಲ,
ಪರಿಧಿಯಿಲ್ಲದ ಬಾನಿಗೆ ಮೋಡಗಳದೇ ಪರದೆ,
ಆ ಪರದೆಯಿಂದಲೇ ಅಪರಿಮಿತಕ್ಕೂ ಪರಿಮಿತಿ.

ಕಿರಣಗಳಿಗೆ ತೂರಿ ಹೋಗುವ ತವಕ,
ಮೋಡಗಳಿಗೋ ನೀರುಣಿಸುವ ಪುಳಕ,
ಭೂಮಿಗೆ ಎರಡರಿಂದಲೂ ಜಳಕ,
ಬಣ್ಣವಿರದ ಬಾನು, ಮೋಡ, ಕಿರಣ,
ಜೊತೆಗೂಡಿ ಮಾಡುವ ಮೋಡಿ
ನೋಡುವ ಕಣ್ಣಿಗೆ ಹಬ್ಬ, ಬೆಡಗು..





Thursday 19 November 2009

ಅವಳು....

ನೀರು ಕೊಟ್ಟ ಬಟ್ಟಲು ಕಂಗಳ ಚೆಲುವೆ
ಯ ಕಣ್ಣ ಮೇಲಿಂದ, ಮೂಗಿನ ಪಕ್ಕ
ದಲ್ಲಿ ಹಾದು ಕೆನ್ನೆಯ ಮೇಲೆ ಬಿದ್ದಂತ
ಮುಂಗುರುಳಿಗೂ, ಕೈಯಲ್ಲಿ ಹಿಡಿದ
ತಂಬಿಗೆಗೂ ಜಗಳ, ಯಾರ ಅದೃಷ್ಟ ಹೆಚೆಂದು.
ಅವಳ ಕೈಯ ಸ್ಪರ್ಶ ಸಿಗದ ತಂಬಿಗೆಯ ನೀರು
ಮಾತ್ರ ತನ್ನ ಸಮಾಧಾನಕ್ಕೆ ಜೋಗದ
ಜಲಪಾತದ ನೀರನ್ನು ಕಂಡು
ಗೆಲುವಿನ ನಗೆ ಬೀರಿತ್ತು.
ನಿನಗಿಂತ ನಾನವಳ ಹತ್ತಿರ ಎಂದು!!!!


Thursday 12 November 2009

ರೇಡಿಯೋ ಬೆಂಗಳೂರು!!!

ಈ ದಶಕದ ಮಾಧ್ಯಮ ವಲಯದಲ್ಲಾದ ಒಂದು ಪ್ರಮುಖ ಬದಲಾವಣೆಯೆಂದರೆ ಎಫ್ ಎಮ್ ರೇಡಿಯೋ. ಈ ಕ್ರಾಂತಿ ಶುರುವಾದಾಗ ಬೆಂಗಳೂರಲ್ಲಿದ್ದ ಎರಡೇ ಚಾನೆಲ್ ಗಳಲ್ಲಿ ಒಂದು 91.1 ರೇಡಿಯೋ ಸಿಟಿ, ಇನ್ನೊಂದು ಆಕಾಶವಾಣಿಯವರ ರೇನ್ ಬೋ. ಮೊದಲನೆಯದು ಬರೀ ಹಿಂದಿ ಸಂಗೀತ ಪ್ರಸಾರಿಸಿದರೆ ಎರಡನೇಯದು ಕನ್ನಡ - ಹಿಂದಿ ಎರಡನ್ನೂ ಪ್ರಸಾರಿಸುತ್ತಿತ್ತು. ಆಫೀಸಿಗೆ ಕಂಪನಿ ಬಸ್ ನಲ್ಲಿ ಪ್ರತಿ ದಿನ ಬೆಳಿಗ್ಗೆ ಒಂಥರಾ ಅಸಹನೀಯವೆನಿಸುವ ವಾತಾವರಣ. ಡ್ರೈವರ್ ಗೆ ಕನ್ನಡ ಬೇಕಿದ್ದರೆ ಕೆಲ ಹೊರಭಾಷಿಕರಿಗೆ ಹಿಂದಿ ಬೇಕಿತ್ತು. ಒಂದೆರೆಡು ವಾರಗಳ ನಂತರ ಡ್ರೈವರ್ ಗೆದ್ದಿದ್ದ!

4 ವರ್ಷಗಳ ನಂತರದ ಈಗಿನ ಬೆಂಗಳೂರು. ಇರುವ 6-7 ರೇಡಿಯೋ ಚಾನೆಲ್ ಗಳಲ್ಲಿ ಒಂದನ್ನು ಬಿಟ್ಟರೆ ಎಲ್ಲವೂ ಕನ್ನಡಮಯ! ಬೇಡಿಕೆ-ಪೂರೈಕೆಗಳ ಮಾರುಕಟ್ಟೆ ವ್ಯವಸ್ಥೆಯ ರೇಡಿಯೋ ಚಾನೆಲ್ ಗಳ ಮ್ಯಾನೇಜ್ ಮೆಂಟ್ ನವರಿಗೆ ಕನ್ನಡದ ಶಕ್ತಿಯ ಪರಿಚಯ ಆಗಿರುವುದು ಸ್ಪಷ್ಟ. ಕನ್ನಡಿಗರ ಅಭಿಮಾನದ ಬಗ್ಗೆ ಪ್ರಶ್ನಿಸುವವರು ಯಾವುದೇ ವೊಲ್ವೋ ಬಸ್ ಹತ್ತಿ ITPB ಗೆ ಹೋಗಿ ಅನುಭವಿಸಬೇಕು. ಎಲ್ಲ ಚಾನೆಲ್ ಗಳವರಿಗೂ ಕನ್ನಡವೇ ಬೇಕು. ರೇಡಿಯೋ ಸಿಟಿ ಇನ್ನೂ ಮಾರುಕಟ್ಟೆಯಲ್ಲಿದೆಯೆಂದರೆ ಕನ್ನಡಕ್ಕೆ ತಿರುಗಿದ್ದೇ ಕಾರಣ.

ಕನ್ನಡ ಪರ ಸಂಘಟನೆಗಳ ಮನವಿಗಳನ್ನು ತಿರಸ್ಕರಿಸಿ, ಬರೀ ಹಿಂದಿ ಹಾಡುಗಳನ್ನು ಕೇಳಿಸುತ್ತಿದ್ದ ರೇಡಿಯೋ ಸಿಟಿ ಅದಕ್ಕೆ ಕೊಟ್ಟ ಕಾರಣ - ಕನ್ನಡ ಹಾಡುಗಳಿಗೆ ಮಾರ್ಕೆಟ್ ಇಲ್ಲ ಎಂಬುದೇ ಆಗಿತ್ತು. ಮನೋ ಮೂರ್ತಿ - ಹರಿಕೃಷ್ಣ - ಕಾಯ್ಕಿಣಿ - ಭಟ್ - ವಿಜಯ್ ಪ್ರಕಾಶ್ - ಸೋನು ನಿಗಮ್ - ಚಿತ್ರಾ - ಶ್ರೇಯಾ - ಮುಂತಾದವರಿಂದ ಒಳ್ಳೆಯ ಹಾಡುಗಳಿಂದಾಗಿ ಈಗ ರೇಡಿಯೋ ತುಂಬೆಲ್ಲ ಕನ್ನಡವನ್ನೇ ಕೇಳಲು ಒಂಥರಾ ಖುಶಿ!!!

Monday 12 October 2009

ಕೊನೆ ಎರಡು ವಾರಗಳು...

ಜನೆವರಿಯಿಂದ ರಿಲೀಸ್ ಕೇಳುತ್ತಿದ್ದೆ. ರಿಸೆಷನ್ ಎಲ್ಲೆಡೆ ತನ್ನ ಪ್ರಭಾವ ಬೀರಿದ್ದರೂ ನನ್ನ ಟೀಮಿನಲ್ಲಿ ನಾನೇ ರಾಜ! ಯಾರೂ ಬರಲೊಪ್ಪದ ಇಲ್ಲಿನ ಟೀಮ್ ಸೇರಿ ಸಮರ್ಥವಾಗಿ (? :) ) ಕೆಲಸ ನಿಭಾಯಿಸಿದ್ದಕ್ಕೋ, ನಾನು ಹೇಳಿದ್ದನ್ನು ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಮ್ಯಾನೇಜರ್ ಇರಲಿಲ್ಲ. ಸರಿ, ಟೀಮ್ ನಲ್ಲೇ ಉಳಿಬೇಕಾದರೆ ಉಳಿದಿದ್ದೊಂದೆ ದಾರಿ -ವಾಪಸ್ ಅಮೇರಿಕದ ಹಾದಿ ಹಿಡಿಯಬೇಕು. ಬಂದ ದಿನದಿಂದಲೂ ಲಂಡನ್ ಹಿಡಿಸಿರಲಿಲ್ಲ - ಹವಾಮಾನ ಒಂದು ಕಡೆ, ಮೂರೇ ಜನರ ಟೀಮ್ ನಲ್ಲಿ ಕೆಲಸದ ಜೊತೆಗೆ ೮೦ ಲಕ್ಷ ಜನರಿರುವ ಊರಲ್ಲಿ ಪರಿಚಯದವರಿಲ್ಲದಿರುವುದೂ ಕಾರಣವಾಗಿತ್ತು. ಸರಿ ಮೇನಲ್ಲಿ ವಾಪಸ್ ಹೋಗುವುದೆಂದು ನಿಶ್ಚಯವಾಯಿತು. ಆದರೆ ರಿಸೆಷನ್ ತನ್ನ ಪ್ರಭಾವ ಬೀರೇ ಬಿಟ್ಟಿತ್ತು. ಬಜೆಟ್ ಇಲ್ಲ ಎಂಬ ಕಾರಣದಿಂದ ನನ್ನ ಅಮೆರಿಕ ಪ್ರಯಾಣ ರದ್ದಾಯಿತು. ಆದರೆ ಅದರ ಜೊತೆಗೆ ಒಂದು ಆಶಾಕಿರಣವೂ ಬೆಳೆಗಿತು!! ಮ್ಯಾನೇಜರ್ ತಾನಾಗೇ ನನ್ನ ಮುಂದಿನ ಪ್ಲ್ಯಾನ್ ಕೇಳಿದಾಗ ಊರಿಗೆ ಮರಳುವ ಪ್ರಸ್ತಾಪ ಮುಂದಿಟ್ಟೆ. ಒಪ್ಪಿಗೆ ಸಿಕ್ಕಿತ್ತು. ಜುಲೈ ಕೊನೆಗೆ ಹೋಗುವುದು ಪಾಸಿಬಲ್ ಅನ್ನಿಸಿತ್ತು. ಆದರೆ ಮ್ಯಾನೇಜರ್ ಸೆಪ್ಟೆಂಬರ್ ಕೊನೆಗೆ ಎಂದ. ಸರಿ, ಇನ್ನೇನು ಎರಡು ತಿಂಗಳ ಮಾತೇ ತಾನೆ ಎಂದು ಸರಿ ಎಂದಿದ್ದೆ.

ಮಧ್ಯೆ ಮತ್ತೇನೋ ಬಂದು ಕೊನೆಗೆ ಅಕ್ಟೋಬರ್ ಕೊನೆ ಎಂದಾಗ ಮತ್ತಷ್ಟು ಗಟ್ಟಿ ಮಾಡಿ ಸರಿ ಎಂದೆ. ಇನ್ನೇನು ಎರಡು ವಾರಕ್ಕೆ ಮರಳುತ್ತಿರುವೆ. ಅದೇಕೋ ಅಮೆರಿಕೆಯಿಂದ ಹೊರಟ ಸಮಯ ನೆನಪಿಗೆ ಬಂತು.
ಮೇ ೦೭ ನಲ್ಲಿ ಅದೇ ತಾನೆ ಅಣ್ಣನ ಮದುವೆ ಮುಗಿಸಿ ಮರಳಿ ಅಮೇರಿಕಕ್ಕೆ ತೆರೆಳಿದ್ದೆ. ಇನ್ನೂ ಬಂದು ಒಂದು ವಾರ ಆಗಿರಲಿಲ್ಲ, ಮ್ಯಾನೇಜರ್ ಕರೆದರು. ಅದೇ ತಾನೆ ಕಾಸ್ಟ್ ಕಟಿಂಗ್ ಎಂದು ಹತ್ತಿಪ್ಪತ್ತು ಪರ್ಸೆಂಟ್ ಜನರನ್ನ ಹೊರಗೆ ಕಳಿಸಿದ್ದರು. ನನ್ನ ಟೀಮ್ ಬೇರೆ ಬದಲಾಯಿಸಿದ್ದರು. ಇದೇನಪ್ಪ ಈಗ ಮತ್ತೊಮ್ಮೆ ಮೀಟಿಂಗ್ ಎಂದು ಹೋದರೆ, ಪಾಸ್ ಪೋರ್ಟ್ ಮತ್ತೆ ಇತರೆ ದಾಖಲೆ ಕಳಿಸಲು ಹೇಳಿದರು. ಯಾಕೆ ಎನ್ನಲು, ಲಂಡನ್ ನಲ್ಲಿರುವ ಟೀಮಿಗೆ ನಿನ್ನ ಅವಶ್ಯಕತೆ ಇದೆ, ಇನ್ನೊಂದು ತಿಂಗಳಲ್ಲಿ ಹೊರಡಬೇಕು ಎಂದಾಗ, ಸ್ವಲ್ಪ ಖುಷಿ, ಸ್ವಲ್ಪ ಕಸಿವಿಸಿಯಾಗಿತ್ತು. ಎರಡೇ ತಿಂಗಳಿಗೆ ಮತ್ತೆ ಊರಿಗೆ ಬರುವ ಅವಕಾಶ ಒಂದು ಕಡೆ ಆದರೆ, ತಿಳವಳ್ಳಿಯ ತರಹವೇ ಇದ್ದ ಆ ಊರನ್ನು ಮತ್ತು ಉಳಿದ ಸವಲತ್ತುಗಳನ್ನು ಬಿಟ್ಟು ಬರಬೇಕೆನ್ನುವ ನಿರಾಶೆ ಇನ್ನೊಂದು ಕಡೆ. ಈ ದ್ವಂದ್ವದಲ್ಲೇ ಒಂದು ತಿಂಗಳು ಕಳೆದದ್ದು ಗೊತ್ತೆ ಆಗಲಿಲ್ಲ. ಯುಕೆ ವೀಸಾ, ಪ್ಯಾಕಿಂಗಿನಲ್ಲಿ, ಬೇಸಿಗೆಯ ತಿರುಗಾಟದಲ್ಲಿ ಮತ್ತು ಪಾರ್ಟಿಗಳಲ್ಲಿ ಸಮಯ ಉರುಳಿ ಹೋಗಿತ್ತು!!

ಆದರೆ ಈ ಸರ್ತಿ ಯಾಕೋ ಸಮಯವೇ ಚಲಿಸುತ್ತಿಲ್ಲ ಅನಿಸುತ್ತಿದೆ. ಟಿಕೆಟ್ ಬುಕ್ಕಾಗಿದೆ. ಅಕ್ಟೋಬರ್ 25 ಕ್ಕೆ ಪಿಕ್ ಮಾಡಲು ಗೆಳೆಯರು ಬರುವುದೂ ನಿಗದಿಯಾಗಿದೆ. ಅಣ್ಣ ನೋಡಲು ಕೆಲ (ಪ್ರಾಸ್ಪೆಕ್ಟಿವ್) ಹುಡುಗಿಯರ ಲಿಸ್ಟ್ ಅನ್ನೂ ರೆಡಿ ಮಾಡಿದ್ದಾಗಿದೆ. ಆದರೆ ಉಳಿದಿರುವ ಈ ಎರಡು-ಮೂರು ವಾರಗಳನ್ನು ಇಲ್ಲಿ ಕಳೆಯುವ ಕಷ್ಟ ಮಾತ್ರ ಹೇಳತೀರದು. ದೊಡ್ಡ ಅತ್ತಿಗೆಯ ಡೆಲಿವರಿ ಡೇಟ್ ಹತ್ತಿರ ಬಂದಿದೆ. ಇಬ್ಬರಲ್ಲಿ ಯಾರ ನಿರೀಕ್ಷೆ ಹೆಚ್ಚು ಕಷ್ಟಕರ ಎಂದು ಹೇಳುವುದು ಕಷ್ಟಕರ!!

ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಕೆರೆದುಕೊಳ್ಳಲೂ ಸಮಯವಿಲ್ಲದ ದಿನಗಳಿದ್ದ ಈ 2 ವರ್ಷಗಳು ಒಂದು ಕಡೆಯಾದರೆ ಈ ಮೂರು ವಾರಗಳು ಇನ್ನೊಂದು ತೂಕವೇ. ಆಫೀಸಿನಲ್ಲೂ ಕೆಲ್ಸ ಕಡಿಮೆ. ಇನ್ನೇನು ಹೋಗುವವ, ಹೀಗಾಗಿ ಇಲ್ಲಿರುವುವರು ಮಾಡಲಿ ಎಂದು ಇರುವ ಕೆಲ್ಸವನ್ನೂ ಮಾಡಲು ಬಿಡದ ನನ್ನ ಟೀಮ್, ನನ್ನ ಇಲ್ಲಿನ 2 ವರ್ಷಗಳ ಬಗ್ಗೆ ಯೋಚಿಸುವಂತೆ ಮಾಡುತ್ತಿದೆ.

ಊರ ತುಂಬ ಜನರಿದ್ದರೂ ಸ್ನೇಹಿತರಿಲ್ಲದಿರುವುದು, ಇರುವ ಕೆಲವರ ನಡುವೆಯೂ ಒಂಟಿಯಾಗಿರುವ ಗೋಳನ್ನು ಕಲಿಸಿದೆ ಈ ಲಂಡನ್. ಅದರ ಜೊತೆಗೇ ನನ್ನನ್ನ ಗಟ್ಟಿಯಾಗಿಸಿಯೂ ಇದೆ. ಹೊಸ ಗೆಳೆಯರನ್ನು ಕೊಟ್ಟಿದೆ. ಬರೆಯಲು ಪ್ರೇರೇಪಿಸಿದೆ. ಓದಿಸಿದೆ. ಕೆಲ್ಸ ಕಲಿಸಿದೆ. ಅಗತ್ಯವಾಗಿದ್ದ ಹಣಕಾಸು ಒದಗಿಸಿದೆ. ಅತಿಯಾಗಿ ಪ್ರೀತಿಸುತ್ತಿದ್ದೆ ಮಳೆಯ ಬಗ್ಗೆ ಬೇಸರ ಮೂಡಿಸಿದೆ. ಅಪರೂಪವಾಗುವ ಸೂರ್ಯನ ಬಗ್ಗೆ ಕುತೂಹಲ ಮೂಡಿಸಿದೆ. ಜೀವನದ ಮೊದಲ ಕ್ರಿಕೆಟ್ ಮ್ಯಾಚ್ ತೋರಿಸಿದೆ, ಅದೂ ಭಾರತ-ಪಾಕ್ ನಡುವೆ. ವೃತ್ತಿಯನ್ನು ರೂಪಿಸಿದೆ.

ತಿರುಗಿ ನೋಡಿದರೆ eventful ಆಗಿದ್ದ ನನ್ನ ಲಂಡನ್ ವಾಸ ಇನ್ನೇನು ಮುಗಿಯಲಿದೆ. ಆದರೆ ಬಂದಾಗಿದ್ದವನಿಗಿಂತ ಬದಲಾಗಿ (ಒಳ್ಳೆಯದಕ್ಕೆ) ಮರಳುತ್ತಿದ್ದೇನೆಂಬ ಸಮಾಧಾನದಿಂದ ಲಂಡನ್ನಿಗೆ ಒಂದು ಸಲಾಮ್!!

Sunday 13 September 2009

ರಾಂಗ್ ನಂಬರ್

ಮಂಗಳವಾರ ಅಕ್ಕಿ-ಆಲೂರು, ಗುರುವಾರ ಸ್ವಂತ ಊರು, ಶುಕ್ರವಾರ ಹಾನಗಲ್, ಶನಿವಾರ ಆನವಟ್ಟಿ, ಭಾನುವಾರ ದಾಸನಕೊಪ್ಪ - ಹೀಗೆ ವಾರಕ್ಕೊಂದು ಊರಿನ ಸಂತೆಯಲ್ಲಿ ಬೆಳ್ಳುಳ್ಳಿ ಮಾರಲು ಹೋಗುತ್ತಿದ್ದ ಮೌನೇಶನಿಗೆ, ಮೊಬೈಲ್ ಖರೀದಿಸಲು ತಿರುಗಾಟವಷ್ಟೆ ಅಲ್ಲದೆ, ಊರಲ್ಲೇ ಮೊಬೈಲ್ ಟವರ್ ಬಂದಿದ್ದು ಕಾರಣವಾಗಿತ್ತು. ಹಾವೇರಿ ಆರ್. ಟಿ. ಒ ನಲ್ಲಿ ಕೆಲಸ ಮಾಡುತ್ತಿದ್ದ ಬಶ್ಯಾ, ಟೆಂಪೋ ಓಡಿಸುತ್ತಿದ್ದ ಸುನ್ಯಾ, ಹಾರ್ಡ್ ವೇರ್ ಅಂಗಡಿಯ ವಿನಾಯಕ, ಬೇರೆ ಕಡೆಯಿಂದ ತಂದು ಲೀಟರಿಗೆ ೪ ರೂ. ಹೆಚ್ಚಿಸಿ ಪೆಟ್ರೋಲ್ ಮಾರುತ್ತಿದ್ದ ಈರೇಶಿ, ಮಲ್ಟಿ ನ್ಯಾಶನಲ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಊರಿಗೆ ಬರೋ ಸಾದಿಕ್ ಹೀಗೆ ಓರಗೆಯ ಎಲ್ಲರ ಬಳಿ ಮೊಬೈಲ್ ಇತ್ತು. ತಾನು ಹಿಂದುಳಿಯಬಾರದೆಂದು ಒಂದು ಮಂಗಳವಾರ ಆಲೂರಿಗೆ ಬದಲಾಗಿ ಹಾವೇರಿಗೆ ಹೋಗಿ ಮೌನೇಶಿಯೂ ಒಂದು ಮೊಬೈಲ್ ಖರೀದಿಸಿದ.



ಎಲ್ಲರೂ ಓರಗೆಯವರೆ. ಎಲ್ಲರೂ ಪಿಯೂಸಿ ಮುಗಿಸಿ ಮನೆಯ ವ್ಯಾಪಾರ ಮುಂದುವರೆಸಿದ್ದರು. ಮೊಬೈಲ್ ಯುಗದ ಆರಂಭದ ಅಬ್ಬರ ಜೋರಾಗೇ ಇತ್ತು. ಊರಲ್ಲಿ ಪಕ್ಕದ ಬೀದಿಯಲ್ಲಿದ್ದರೂ ಕಾಲ್ ಮಾಡಿ ಮಾತಾಡುವುದು, ಮಿಸ್ಡ್ ಕಾಲ್ ಮಾಡಿ ಟೈಮ್ ಹೊಂದಿಸಿ ಗಿರೀಶನ ಅಂಗಡಿ ಬಳಿ ಸೇರುವುದು, ಮೆಸೇಜ್ ಮಾಡಿ ನಂಬರ್ ತೆಗೆದುಕೊಳ್ಳುವುದು, ಇತ್ಯಾದಿ ಇತ್ಯಾದಿ... ಸ್ವಲ್ಪ ಬದಲಾವಣೆ ಇರಲಿ ಎಂದು ಇತ್ತೀಚಿಗೆ ಅಡ್ಡೆ ಬದಲಾಯಿಸಿ ಸುನ್ಯಾನ ಟೆಂಪೋದಲ್ಲಿ ಸೇರತೊಡಗಿದ್ದರು.



ಎಲ್ಲರ ಸಮಯ ಕೂಡಿಬಂದು ಒಂದಿನ ಗೋಕಾಕ್ ಫಾಲ್ಸ್ ಗೆ ಟ್ರಿಪ್ ಗೆ ಹೋಗುವುದೆಂದು ನಿರ್ಧರಿಸಿದರು. ಊರಲ್ಲಿ ಕುಡಿಯಲಾಗುವುದಿಲ್ಲವೆಂಬುದು ಮುಖ್ಯ ಕಾರಣ. ಹುಬ್ಬಳ್ಳಿಗೆ ಬರುತ್ತಲೇ ಶುರುವಾದ ಪಾನಸೇವನೆ, ಕಾರಲ್ಲೂ ಮುಂದುವರೆದಿತ್ತು. ಸವದತ್ತಿ ರೋಡಿನಲ್ಲಿರಬೇಕಾದರೆ ಶುರುವಾಯಿತು ಮೊಬೈಲ್ ಹೊಡೆದುಕೊಳ್ಳ್ಸಲು. ಕಾಲ್ ಬಂದಿದ್ದು ಸುನಿಲನ ಸೆಲ್ ಗೆ. ಮೊದಲಿಗೆ ಹೆದರಿಕೆ - ಮನೆಯವರದ್ದ್ಯಾರದ್ದೋ ಇರಬೇಕೆಂದು. ಆದರೆ ನಂಬರ್ ಪರಿಚಿತವಲ್ಲ. ಹೊಟ್ಟೆಯಲ್ಲಿ ಶಂಕರ ಬೇರೆ. ತಲೆ ಓಡುತ್ತಿಲ್ಲ, ತಿರುಗುತ್ತಿದೆ. ಕಾಲ್ ಕಟ್ ಮಾಡಿದ. ಮತ್ತೆ ರಿಂಗ್ ಆಯ್ತು. ಮತ್ತೆ ಕಟ್ ಮಾಡಿದ. ಹೀಗೆ ಮುಂದುವರೆದಿತ್ತು ಆಟ. ಇನ್ನೊಂದಿಷ್ಟು ಎಣ್ಣೆ ಬಿದ್ದಿದ್ದೇ ಇನ್ನಿಲ್ಲದ ಧೈರ್ಯ ಬಂತು. ಈ ಸರ್ತಿ ಎತ್ತುವುದೆಂದು ನಿರ್ಧರಿಸಿದರು. ಕಾರಿನ ಸಂಗೀತ ನಿಂತಿತ್ತು. ಆದರೆ ಕಾಲ್ ಬರಲಿಲ್ಲ. ತಲೆ ಕೆಟ್ಟು ತಾನೆ ಕಾಲ್ ಮಾಡಿದ. ’ಯಾರ್ರಿ ಮಾತಾಡೋದು.. ಯಾರ್ ಬೇಕಾಗಿತ್ತ್ರಿ?’ ಆ ಕಡೆಯಿಂದ ಹೆಣ್ಣಿನ ಧ್ವನಿ. ’ನಾನ್ ಶುಭ ಮಾತಾಡ್ತಿರೋದು. ಎಲ್ಲಿದಿಯ, ಏಕೆ ಕಾಲ್ ಎತ್ತುತ್ತಿಲ್ಲ?’ ಕಂಪ್ಲೆಂಟಿನ ಧ್ವನಿ. ’ನಾ ಹೊರಗ್ ತಿರ್ ಗಾಡಾಕ್ ಬಂದೀನ್ರಿ, ಗೋಕಾಕ್ ಕಡೆ ಹೊಂಟಿದ್ವ್ಯೆ, ಹಿಂಗಾಗಿ ಗೊತ್ತಾಗಿಲ್ಲ್ರಿ. ಯಾಕ್ ಕಾಲ್ ಮಾಡಿದ್ದ್ರಿ? ಗಾಡಿ ಎನಾರ ಭಾಡಿಗಿಗ್ ಬೇಕಿತ್ತೇನ್ರಿ? ಯಾವ್ ಊರ್ರಿ?’ ಸುನ್ಯಾನ ವ್ಯಾಪಾರಿ ಬುದ್ಧಿಗೆ ಯಾವುದೇ ಶೆರೆ ಹತ್ತುತ್ತಿರಲಿಲ್ಲ. ಅದು ಯಾವಾಗಲೂ ಎಚ್ಚರವಿರುತ್ತಿತ್ತು.

ಆದರೆ ಆ ಕಡೆಯ ಧ್ವನಿಗೆ ಕನ್ಫ್ಯೂಷನ್. ಈ ಭಾಷೆ ಹೊಸದು. ’ಏ, ಎನಾಯ್ತೋ ನಿಂಗೆ, ಈ ಭಾಷೆ ಎಲ್ಲಿ ಕಲ್ತೆ, ಅದು ಅಲ್ದೆ ಗೋಕಾಕ್ ಎಲ್ಲಿದೆಯೋ? ನೀನ್ ಅಲ್ಲಿಗೇಕೆ ಹೋಗ್ತಿದ್ದೀಯ? ಈ ರೀ ಅನ್ನೋದ್ ಯಾವಾಗಿಂದ ಕಲ್ತ್ಯೋ?’



ರಾಂಗ್ ನಂಬರ್ ಅಂತ ಹೊಳೆದಿದ್ದೇ ಆಗ. ಆದರೆ ಕಾಲ್ ಮಾಡಿದ್ದು ತಾನೇ ಆದ್ದರಿಂದ ಹೆಚ್ಚಿಗೆ ಮಾತು ಬೆಳೆಸದೇ ಕಟ್ ಮಾಡಿದ. ಹೊಟ್ಟೆಯಲ್ಲಿದ್ದ ಪರಮಾತ್ಮ ಎಲ್ಲರ ಮನಸ್ಸಲ್ಲೂ ಮಂಗನಾಟ ಶುರು ಮಾಡಿತ್ತು. ತಲೆಗೊಂದು ಮಾತು.”ಯಾವ್ದೋ ಮೈಸೂರ್ ಕಡೆ ಹುಡುಗಿಲೇ, ರಾಂಗ್ ನಂಬರ್ ಆಗಿತ್ತ, ಹಿಂಗಾಗಿ ಕಟ್ ಮಾಡೀದ್ಯಾ’ ಅಂದರೂ ಕೇಳಲು ತಯಾರಿಲ್ಲ.

ಅಂತು ಇಂತು ಗೋಕಾಕ್ ಜಲಪಾತ ನೋಡಿ ಬಂದಿದ್ದಾಯ್ತು. ಆದರೆ ಆ ನಂಬರ್ ನಿಂದ ಕಾಲ್ ಬರುವುದು ನಿಲ್ಲಲಿಲ್ಲ. ಒಂದು ವಾರ-ಹತ್ತು ದಿನದಲ್ಲಿ ಇಬ್ಬರೂ ಇನ್ನೊಬ್ಬರ ಬಗ್ಗೆ ಎಷ್ಟು ತಿಳ್ಕೋಬೇಕಿತ್ತೋ ಅದಕ್ಕಿಂತ ಜಾಸ್ತಿ ತಿಳಕೊಂಡಿದ್ದರು. ಅಥವಾ ಹಾಗೆ ಅಂದುಕೊಡ್ಡಿದ್ದರು. ಹೀಗೇ ಒಂದು ಸಂಜೆ ಸಿಕ್ಕಾಗ ಸುನ್ಯಾ ಈ ವಿಷಯದ ಪ್ರಸ್ತಾಪ ಮಾಡಿದ. ಅದೇ ಸಮಯಕ್ಕೆ ಕಾಲ್ ಬಂತು. ಈ ಸರ್ತಿ ಫೋನ್ ಎತ್ತಿದ್ದು ಮೌನೇಶಿ. ಅರ್ಧ ಗಂಟೆ ಮಾತಾಡಿದ! ಅದೇ ಮೊದಲು - ಅದೇ ಕೊನೆ, ಸುನ್ಯಾನ ನಂಬರಿಗೆ ಕಾಲ್ ಬರ್ಲಿಲ್ಲ.

ಈಗ ಮೌನೇಶಿ ಶುಭಾಳನ್ನು ಮದುವೆ ಆಗಿ ಆರು ತಿಂಗಳು!