Saturday 23 August 2008

ಏನಾರ ಬರೀಬೇಕ್..

ಏನಾರ ಬರೀಬೇಕ್ ಅನ್ಸೇತಿ. ಏನ್ ಬರೀಬೇಕ್ ಅಂತ ತಿಳೀವಲ್ದಾಗೇತಿ... ಹಿಂಗಾಗೆ ಬಂದಿರೋ ನಾಕೈದು ವಿಚಾರ ಗೀಚೇನಿ..

ಧಾರ್ವಾಡ್ ಭಾಷೆದಾಗ್ ಪಿಚ್ಚರ್:
ಇಲ್ಲಿ ತನ ಕನ್ನಡ್ ಸಿನೇಂದಾಗ್ ಧಾರ್ವಾಡ್ ಭಾಷಾ ಪಾವರ್ಸಿಲ್ಲಾ ಅಂದ್ರ ಸುಳ್ಳಾಗ್ತದ. ಆದ್ರ ಬರೇ ಅದ ಭಾಷಾ ಉಪ್ ಯೋಗ್ಸಿ ಯಾವ್ ಸಿನೇಮಾ ನು ಬಂದಿಲ್ಲ ಅನ್ನೋದು ಖರೆ. ಸಂತ ಶಿಶುನಾಳ ಷರೀಫ, ಗಾನಯೋಗಿ ಪಂಚಾಕ್ಷರಿ ಗವಾಯಿ, ನಾಗಮಂಡಲ ಹಿಂಗ ಕೆಲ್ವೊಂದು ನಮ್ ಕಡಿ ಕಥಿ ಇಟ್ಕೊಂಡಿರೋ ಸಿನೇಮ ಬಂದಾವು, ಆದ್ರು ನಡ್ ನಡುವ ಡೈರ್‍ಕ್ಟರ್ ಭಾಷಾ ಛಾಪು ಕಾಣ್ಸಿರ್ತದ.
ಮೂಡಲ ಮನೆ ಅಂತ ಧಾರವಾಹಿ ಏನೋ ಬಂದಿತ್ತು. ಅದ್ರಾಗು ’ಮನೆ’ ನ ಆತ ಹೊರ್ತು ’ಮನಿ’ ಆಗ್ಲಿಲ್ಲ.

ಬಿ.ವಿ.ಬಿ ಕಾಲೇಜಿನ್ ಹುಡುಗ, ಎಸ್.ಜೆ.ಎಮ್ ಕಾಲೇಜ್ ಹುಡುಗಿ. ಇಲ್ಲಾ ಕೆ.ಸಿ.ಡಿ ಹುಡುಗ, ಜೆ.ಎಸ್.ಎಸ್. ಹುಡುಗಿ. ಕಾಲೇಜ್ ಕಥಿ ಬ್ಯಾಡಾ ಅಂದ್ರ, ಬಿಜಾಪುರ್ ಹುಡುಗ ಕಿತ್ತೂರ್ ಹುಡುಗಿ. ನಡುವ ಗದಗ್ ರಾಜಕೀಯ. ಇಲ್ಲಾ ಸೌಂದತ್ತಿ ಹೀರೋ ಐ.ಏ.ಎಸ್ ಪಾಸಾಗಿ ಧಾರ್ವಾಡಕ್ಕ ಡಿ.ಸಿ ಆಗಿ ಬಂದು ಪಾಟೀಲ್ ಅನ್ನೋ ವಿಲನ್ ಅಟ್ಟ್ಯಾಡ್ಸಿ ಹೊಡ್ಯೋದು.. ಹಿಂಗ ಒಂದಿಷ್ಟು ವಿಚಾರ ಅವ. ನೋಡೋಣು..


ಹುಬ್ಬಳ್ಳಿ- ಭಾರತದ ಸಾಫ್ಟ್ ವೇರ್ ಬೇಸ್.
ಹುಡುಕ್ಯಾಡಿದ್ರ ಹತ್ರಾಗ್ ಒಬ್ಬರ ಧಾರ್ವಾಡ್ ಕಡಿ ಮನ್ಷ ಸಿಗೋ ಈ ಇಂಡಸ್ಟ್ರಿ, ನಮ್ ಹುಬ್ಬಳ್ಳ್ಯಾಗ್ ಯಾಕ್ ಬೆಳಿಬಾರ್ದು? ಕೇಶ್ವಾಪುರ ನ ವೈಟ್ ಫೀಲ್ಡ್, ಗೋಕುಲ್ ರೋಡ್ ನ ಎಲೆಕ್ಟ್ರಾನಿಕ್ ಸಿಟಿ ಮಾಡಿದ್ರ, ನವನಗರ ತನ್ ತಾನ ಕೋರಮಂಗಲ ಆಗ್ತದ. ಚನ್ನಮ್ಮ ಸರ್ಕಲ್ ಇನ್ನೊಂದು ಗಾಂಧಿ ನಗರ ಆಗಿ, ದೇಶ್ ಪಾಂಡೆ ನಗರ ಹೊಸ ಜಯನಗರ ಆಗ್ ಬಾರ್ದ್ಯಾಕ್?


ಹುಬ್ಬಳ್ಳಿ - ಬೆಂಗಳೂರು - 4 ತಾಸ್ನ್ಯಾಗ್ ಮುಟ್ಸೋ ಟ್ರೈನು..
ಇರೋ 400 ಕಿಲೋ ಮೀಟ್ರಿಗೆ 10 ತಾಸ್ ಯಾಕ್ ಬೇಕ್ ಪಾ? ತಾಸಿಗೆ 100 ಕಿ.ಮೀ ಓಡೋ ಅಂತ ಟ್ರೈನ್ ಹಾಕಿಶಿ, ಬೆಳಿಗ್ಗೆ 6 ಗಂಟೆ ಕ್ಕ ಹುಬ್ಬಳ್ಳಿ ಬಿಟ್ರ 10 ಗಂಟೆ ಕ್ಕ ಬೆಂಗಳೂರಾಗ್ ಇರ್ಬೇಕ್. ಎಷ್ಟೆಲ್ಲಾ ಕೆಲ್ಸ ಹಗುರಾಕ್ಕಾವ್.

ಹಿಂಗ ವಿಚಾರ ಮಾಡ್ಕೋತ ಕುಂತಾಗ ತಲಿ ಮತ್ತ ಮತ್ತ ಹುಬ್ಬಳ್ಳಿ-ಧಾರ್ವಾಡ್ ದ್ ಕಡೀನ ಸುತ್ತಾಡ್ತೇತಿ. ಹಿಂಗಾಗಿ ಮತ್ತೊಂದ್ ಛೊಲೋ ಬ್ಲಾಗ್ ತಪ್ಪಿ ಹೋಗ್ಬೌದು. ಹಂಗಂತ ವಿಚಾರ ನ ಮಾಡ್ಡಿದ್ರ ಹೆಂಗ? ನಿಮ್ಗೇನಾರ ಬೇರೇ ವಿಚಾರ ಬರಾಕತ್ತಿದ್ರ ಇಲ್ಲೇ ಗೀಚಿ ಹೊಗ್ರೆಲ... ಏನಂತೀರಿ?