Sunday 23 August 2009

ಕಳ್ಳ ಗಣಪ..

"ಈ ಸರ್ತೆ ಕರೇಗಲ್ ಗಣಪ್ಪ ಎಲ್ಲಾರ್ನೂ ಮೀರ್ಸಬೇಕ್, ಆ ಅಗಶಿಬಾಗಲದವರಿಗೆ ಹೆಂಗಾರ ಮಾಡಿ ನಮ್ ಕಡೆ ಬರೋಹಂಗ ಮಾಡಿದ್ರ ನಮ್ಮನ್ ಹಿಡಿಯೋರಿಲ್ಲ ಮಾಸ್ತರ...." ಪ್ರತಿ ವರ್ಷದ ಚೌತಿಗೆ ಈ ಮಾತು ಬಂದೇ ಬರೋದು. ಪ್ಯಾಟ್ಯಾಗಿನವರಿಗೆ ಗಣಪ್ಪನ್ ಹೆಂಗ್ ಇಡೋದು ಅನ್ನೋದನ್ನ ತೋರಿಸಬೇಕು ಎಂದು ನಾವು ನಿರ್ಧರಿಸದರೆ, ಅದೇ ನಿರ್ಧಾರ ಆ ಕಡೆಯವರಲ್ಲಿ ದುಪ್ಪಟ್ಟಾಗಿರುತ್ತಿತ್ತು. ಇರೋ ೪ ಸಾವಿರ ಜನಸಂಖ್ಯೆಯ ಊರಲ್ಲೇ ಓಣಿಗೊಂದರಂತೆ ಹತ್ತಿಪ್ಪತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿತನಾಗಿರುತ್ತಿದ್ದ ಗಣಪ್ಪ, ನನ್ನೂರಲ್ಲಿ ದೊಡ್ಡ ಗದ್ದಲದ ದೇವರು! ತದಿಗೆ ತನಕ ಇರುತ್ತಿದ್ದ ಮುನಿಸು, ಒಳ ಜಗಳಗಳು ಸಂಜೆಯಷ್ಟರಲ್ಲಿ ಮಾಯವಾಗಿ, ಅಲಂಕಾರಕ್ಕೆ ಬೇಕಾದ ವ್ಯವಸ್ಥೆ, ಅವಸ್ಥೆಗಳಲ್ಲಿ ಮುಳುಗಿ ಆ ಕ್ಷಣದ ಟೀಮ್ ತಯಾರಾಗಿರುತ್ತಿತ್ತು. ದಿ ಮೋಸ್ಟ್ ಸೆಲೆಬ್ರೇಟೆಡ್ ೪ ಹಬ್ಬಗಳಲ್ಲಿ ಬಹುಷಃ ಚೌತಿ ನಂ ೧. ದೀಪಾವಳಿ, ದಸರ, ಹೋಳಿ ನಂತರದಲ್ಲಿ ಬರುವ ಹಬ್ಬಗಳು.

ಕಣ್ಣು ಬಿಟ್ಟಾಗಿಂದ, ಬುದ್ಧಿ ಬೆಳೆದಾಗಿಂದ ಮನೆಯಲ್ಲಿ ಎಲ್ಲಿ ನೋಡಿದರಲ್ಲಿ ಗಣೇಶ ಮೂರ್ತಿ/ಚಿತ್ರಗಳನ್ನು ನೋಡಿದವ ನಾನು. ಅಣ್ಣನಿಗೆ ಇನ್ನಿಲ್ಲದ ಭಕ್ತಿ ಗಣಪ್ಪನ ಮೇಲೆ. ಬೇರೆ ಮನೆಯಲ್ಲಿದ್ದರೂ ಅವಿಭಕ್ತ ಕುಟುಂಬ, ಹಾಗಾಗಿ ಮನೆಯಲ್ಲಿ ಗಣೇಶ ಇಲ್ಲ. ’ಆ ಮನೆ’ (ದೊಡ್ಡಪ್ಪನ ಮನೆ)ಯಲ್ಲಿ ಸ್ಥಾಪನೆ, ಪೂಜೆ, ಊಟ. ಚಿಕ್ಕಪ್ಪ/ಚಿಕ್ಕಮ್ಮನವರ ಆಗಮನ ಹತ್ತಿರದ ಹಾನಗಲ್ ನಿಂದ. ಅತ್ಯಾಳಂತೂ ಒಂದು ದಿನ ಮುಂಚೆಯೇ ಹಾಜರ್. ಅವಳ ಬರುವಿಕೆ ಕಾಯುವುದಕೆ ಅವಳು ಶಿರಸಿಯಿಂದ ತರುತ್ತಿದ್ದ ತಾಳೆಗರಿ ಪಟಾಕಿ ಮುಖ್ಯ ಕಾರಣ! ನಮ್ಮಲ್ಲಿ ಪಟಾಕಿ - ಗಣೇಶನ ಹಬ್ಬಕ್ಕೆ, ದೀಪಾವಳಿಗಲ್ಲ. ಊರ ತುಂಬ ೫ ದಿನ ಗದ್ದಲ, ೧೧ ನೇ ದಿನದವರೆಗೂ ಮುಂದುವರಿಯುವುದು.

ಹೀಗೆ ಮನೆಯಲ್ಲಿ ಕಿರಿಯನಾಗಿ, ಸಾರ್ವಜನಿಕ ಗಣೇಶೋತ್ಸವದಲ್ಲಿ ಹಿರಿಯರಲ್ಲಿ ಕಿರಿಯವನಾಗಿ ಎರೆಡೆರಡು ಕಡೆ/ಸಲ ಹಬ್ಬ. ಜೊತೆಗೆ ೭ನೇ ಕ್ಲಾಸ್ ತನಕ ಶಾಲೆಯಲ್ಲೂ ಹಬ್ಬ! ಒಂದು ಹಬ್ಬದಲ್ಲಿ ಹತ್ತಾರು ಹಬ್ಬಗಳನ್ನು ಜೊತೆಗೇ ತರುವ ವಿನಾಯಕ ಸ್ಪೆಷಲ್ ದೇವರೇ. :)

ಆದರೂ ಮನಸ್ಸಿನಲ್ಲೇನೋ ಕುಟುಕು. ಅಣ್ಣ-ಅಮ್ಮ ಇವತ್ತಿಗೂ ಗೊಣಗಿಲ್ಲ, ಆದರೂ ನನ್ನ ಆ ಚಿಕ್ಕ ಮನಸ್ಸಿಗೇಕೋ ಕೊರತೆ. ನಮ್ಮನೇಲಿ ಗಣಪ್ಪ ಯಾಕಿಲ್ಲ? ಅಷ್ಟೊಂದು ಭಕ್ತಿ ಇಡುವ ಅಣ್ಣ, ಮನೇಲಿ ಯಾಕೆ ವಿಘ್ನನಾಶಕನ್ನ ಕೂರಿಸಲ್ಲ? ನಮ್ಮನೇಲೆ ಯಾಕೆ ಅಡಿಗೆ ಮಾಡಿ, ನೈವೇದ್ಯೆ ಮಾಡಿ, ಪೂಜಿಸಬಾರದು? ಬಹುಷಃ ೪ ನೇ ಕ್ಲಾಸ್ ನಿಂದ ಈ ವಿಚಾರಗಳು ಬರುತ್ತಿದ್ದವು. ಹೈ ಸ್ಕೂಲಿಗೆ ಬರುವಷ್ಟರಲ್ಲಿ ಈ ವಿಚಾರಗಳು ಬಲಿತಿದ್ದವು. ಆದರೂ ಯಾರಲ್ಲಿಯೂ ಹೇಳಿರಲಿಲ್ಲ. ಕೊನೆಗೊಂದು ವರ್ಷ, ೯ ನೇಕ್ಲಾಸ್ ನಲ್ಲಿದ್ದಾಗ, ಕರೇಗಲ್ ಗಣಪ್ಪನ ತಯಾರೀಲಿ ಕೂತವನಿಗೆ ಕಂಡಿದ್ದು, ಬಡಿಗೇರ್ ಗಿರಿ ಮಾಡಿಟ್ಟಿದ್ದ ಚಿಕ್ಕ ಗಣಪ. ಅದು ಅವರಪ್ಪ ಮಾಡಿದ ದೊಡ್ಡ ಗಣಪನ ಪಕ್ಕ ಕೂರಿಸುವ ವಿಚಾರದಿಂದ ಮಾಡಿಟ್ಟಿದ್ದು. ಎಲ್ಲಿತ್ತೋ, ಅವನ ಜೊತೆ ಮಾತಾಡಿ, ಅವನನ್ನೇ ಕಳ್ಳ ಗಣಪ್ಪನ ಇಡುವ ಕಳ್ಳನ ರೋಲ್ ಗೆ ಒಪ್ಪಿಸಿದೆ. ಬೆಳಿಗ್ಗೆ ೪-೫ ಗಂಟೆಗೆ ಮನೆ ಮುಂದೆ ಆ ಮೂರ್ತಿಯನ್ನಿಡುವ ಒಪ್ಪಂದವಾಯಿತು. ನಾನು ರಾತ್ರಿ ಹೊರಗೆ ಇದ್ದರೆ ಸಂಶಯ ನನ್ನ ಮೇಲೇ ತಿರುಗುತ್ತದೆಯೆಂದು ರಾತ್ರಿ ಬೇಗನೇ ಮನೆಗೆ ಬಂದೆ. ಎಲ್ಲರ ಜೊತೆ ಊಟ ಮಾಡಿ ನನ್ನಿರುವನ್ನು ನಿರೂಪಿಸಿದೆ. ಅರೆ ಮನಸ್ಸಿನಿಂದಿದ್ದ ನಾನು, ಮಲಗೋ ಹೊತ್ತಿಗೆ ಪೂರ್ತಿ ತಯಾರಾಗಿದ್ದೆ. ಅಂದುಕೊಂಡ ಹಾಗೆ, ಬೆಳಿಗ್ಗೆ ಅಮ್ಮ ಕಸಗುಡಿಸಲು ಎದ್ದಾಗ, ಅದೋ, ಎದುರುಗಿದ್ದ ಕರೇಗಲ್ ನಲ್ಲಿ ಪಕ್ಕದಲ್ಲಿ ಕೂರಬೇಕಿದ್ದ ಪುಟ್ಟ ಗಣೇಶ!!

ಶುರುವಾಯಿತು ಗದ್ದಲ, ಗೊಂದಲ. ಮುಂದೇನು ಮಾಡುವುದು ಎಂದು ಎಲ್ಲ ದೊಡ್ಡವರ ಸಮಾಲೋಚನೆ. ಅವನನ್ನೂ ಆ ಮನೇಲೆ ಕೂಡಿಸಿ ಪೂಜಿಸುವುದೆಂದು ಅಣ್ಣನ ವಾದ. ಇಲ್ಲ, ಅವನಾಗೇ ಹಿಂದಿನ ಮನೆ (ನಮ್ಮನೆ)ಗೆ ಬಂದಿರುವುದರಿಂದ ಅಲ್ಲೇ ಕೂಡಿಸಿ ಪ್ರತ್ಯೇಕ ಪೂಜೆ-ನೈವೇದ್ಯ ಎಂದು ದೊಡ್ಡಪ್ಪ-ಚಿಕ್ಕಪ್ಪನ ವಾದ. ಜೊತೆಗೇ ಚಿಕ್ಕ ಮೂರ್ತಿಯ ಅಂದದ ಹೊಗಳಿಕೆ. ಒಂದೆರೆಡು ಗಂಟೆಯ ಮೀಟಿಂಗ್ ನಂತರ ದೊಡ್ಡಪ್ಪನ ಮಾತಿನಂತೆ ನಮ್ಮನೇಲೆ ಕೂರಿಸುವುದೆಂದು ನಿಶ್ಚಯಿಸಿದಾಗ ಏನೋ ಸಾರ್ಥಕತೆ. ಆ ವರ್ಷ ನಾನು ಸ್ವಲ್ಪ ಜಾಸ್ತಿಯೇ ಪಟಾಕಿ ಹೊಡೆದರೆ, ಅಣ್ಣ ಸ್ವಲ್ಪ ಡಲ್ ಆಗಿದ್ದರು. ಅಮ್ಮನಿಗೆ ಖುಷಿಯೋ ಖುಷಿ. ಎಲ್ಲರಿಗೂ ನನ್ನ ಮೇಲೆ ಒಂದು ಅನುಮಾನ, ಇದು ಇವನದೇ ಕೆಲಸ ಎಂದು. ಆದರೆ ನಾನೆಲ್ಲೂ ಅದನ್ನು ಬಿಟ್ಟು ಕೊಡಲಿಲ್ಲ. ನನ್ನ ಗೆಳೆಯರ ಕೆಲಸ ಇರಬಹುದು, ಆದರೆ ನಾನು ಹೇಳಿ ಮಾಡಿಸಿದ್ದಲ್ಲ ಎಂದು ಸುಳ್ಳು ಪಟಾಕಿ ಬಿಟ್ಟೆ, ಗೆದ್ದೆ!!

ಹೀಗೆ ಕಳ್ಳ ಗಣಪ ಮನೆಗೆ ಬಂದಿದ್ದು ನಮ್ಮನೆಗೆ.

ಮುಂದೆ ಐದಾರು ವರ್ಷಗಳವರೆಗೆ ನನ್ನ ಗುಟ್ಟನ್ನು ಕಾಪಾಡಿಕೊಂಡಿದ್ದೆ. ಡಿಗ್ರಿ ಓದಲು ಧಾರವಾಡದಲ್ಲಿದ್ದಾಗ ಕೊನೆಗೊಂದು ಸರ್ತಿ ಗಣೇಶ ಚೌತಿಯಂದೇ ಗುಟ್ಟು ರಟ್ಟು ಮಾಡಿದೆ. (ಹೊಡೆಯುವುದಿಲ್ಲ ಎಂದು ಗ್ಯಾರಂಟಿಯಾದ ನಂತರವೇ :) )

ಅದಾಗಿ ಈಗ ೧೩ನೇ ವರ್ಷ. ದೊಡ್ಡಣ್ಣ್ (ದೊಡ್ಡಪ್ಪನ ಮಗ) ಹೊಸಪೇಟೆ-ಹುಬ್ಬಳ್ಳಿ. ಅಣ್ಣ ಬೆಂಗಳೂರು. ನಾನಿಲ್ಲಿ ಲಂಡನ್. ಹೀಗೆ ಮಕ್ಕಳೆಲ್ಲ ಬೇರೆ ಕಡೆ ಇರುವಾಗ, ಮನೇಲಿ ಅಣ್ಣ-ಅಮ್ಮ ಇಬ್ಬರೇ. ಕಳ್ಳ ಗಣಪನ ಆಗಮನದಿಂದ ಈಗಲೂ ನಮ್ಮನೇಲಿ ಪೂಜೆ. ಮುಂಚೆಯಲ್ಲ ೧೧ ದಿನ ಇರುತ್ತಿದ್ದ ಗಣಪ, ೫ ದಿನಕ್ಕಿಳಿದು, ೩ ದಿನದ ಅತಿಥಿಯಾಗಿ, ಈಗ ಬೆಳಿಗ್ಗೆ ಬಂದು ಸಂಜೆ ಹೋಗುವ ನಮ್ಮಣ್ಣ- ನನ್ನ ಥರ ಆಗಿದ್ದಾನೆ ಎಂದು ಅಣ್ಣ ಹೇಳಿದಾಗ ಸ್ವಲ್ಪ ಕಸಿವಿಸಿಯಾಯಿತು. ಆದರೂ..... ಅಮ್ಮನ ಗಡಿಬಿಡಿ, ಅಣ್ಣನ ಸಂಭ್ರಮ ನೋಡಿದರೆ... ಕಳ್ಳತನದಿಂದ ತರಿಸಿದ ಗಣೇಶನಿಗೊಂದು ಮನಸ್ಸಿನಲ್ಲೇ ನಮಸ್ಕಾರ ಹಾಕುತ್ತೇನೆ.