Thursday 19 November 2009

ಅವಳು....

ನೀರು ಕೊಟ್ಟ ಬಟ್ಟಲು ಕಂಗಳ ಚೆಲುವೆ
ಯ ಕಣ್ಣ ಮೇಲಿಂದ, ಮೂಗಿನ ಪಕ್ಕ
ದಲ್ಲಿ ಹಾದು ಕೆನ್ನೆಯ ಮೇಲೆ ಬಿದ್ದಂತ
ಮುಂಗುರುಳಿಗೂ, ಕೈಯಲ್ಲಿ ಹಿಡಿದ
ತಂಬಿಗೆಗೂ ಜಗಳ, ಯಾರ ಅದೃಷ್ಟ ಹೆಚೆಂದು.
ಅವಳ ಕೈಯ ಸ್ಪರ್ಶ ಸಿಗದ ತಂಬಿಗೆಯ ನೀರು
ಮಾತ್ರ ತನ್ನ ಸಮಾಧಾನಕ್ಕೆ ಜೋಗದ
ಜಲಪಾತದ ನೀರನ್ನು ಕಂಡು
ಗೆಲುವಿನ ನಗೆ ಬೀರಿತ್ತು.
ನಿನಗಿಂತ ನಾನವಳ ಹತ್ತಿರ ಎಂದು!!!!


Thursday 12 November 2009

ರೇಡಿಯೋ ಬೆಂಗಳೂರು!!!

ಈ ದಶಕದ ಮಾಧ್ಯಮ ವಲಯದಲ್ಲಾದ ಒಂದು ಪ್ರಮುಖ ಬದಲಾವಣೆಯೆಂದರೆ ಎಫ್ ಎಮ್ ರೇಡಿಯೋ. ಈ ಕ್ರಾಂತಿ ಶುರುವಾದಾಗ ಬೆಂಗಳೂರಲ್ಲಿದ್ದ ಎರಡೇ ಚಾನೆಲ್ ಗಳಲ್ಲಿ ಒಂದು 91.1 ರೇಡಿಯೋ ಸಿಟಿ, ಇನ್ನೊಂದು ಆಕಾಶವಾಣಿಯವರ ರೇನ್ ಬೋ. ಮೊದಲನೆಯದು ಬರೀ ಹಿಂದಿ ಸಂಗೀತ ಪ್ರಸಾರಿಸಿದರೆ ಎರಡನೇಯದು ಕನ್ನಡ - ಹಿಂದಿ ಎರಡನ್ನೂ ಪ್ರಸಾರಿಸುತ್ತಿತ್ತು. ಆಫೀಸಿಗೆ ಕಂಪನಿ ಬಸ್ ನಲ್ಲಿ ಪ್ರತಿ ದಿನ ಬೆಳಿಗ್ಗೆ ಒಂಥರಾ ಅಸಹನೀಯವೆನಿಸುವ ವಾತಾವರಣ. ಡ್ರೈವರ್ ಗೆ ಕನ್ನಡ ಬೇಕಿದ್ದರೆ ಕೆಲ ಹೊರಭಾಷಿಕರಿಗೆ ಹಿಂದಿ ಬೇಕಿತ್ತು. ಒಂದೆರೆಡು ವಾರಗಳ ನಂತರ ಡ್ರೈವರ್ ಗೆದ್ದಿದ್ದ!

4 ವರ್ಷಗಳ ನಂತರದ ಈಗಿನ ಬೆಂಗಳೂರು. ಇರುವ 6-7 ರೇಡಿಯೋ ಚಾನೆಲ್ ಗಳಲ್ಲಿ ಒಂದನ್ನು ಬಿಟ್ಟರೆ ಎಲ್ಲವೂ ಕನ್ನಡಮಯ! ಬೇಡಿಕೆ-ಪೂರೈಕೆಗಳ ಮಾರುಕಟ್ಟೆ ವ್ಯವಸ್ಥೆಯ ರೇಡಿಯೋ ಚಾನೆಲ್ ಗಳ ಮ್ಯಾನೇಜ್ ಮೆಂಟ್ ನವರಿಗೆ ಕನ್ನಡದ ಶಕ್ತಿಯ ಪರಿಚಯ ಆಗಿರುವುದು ಸ್ಪಷ್ಟ. ಕನ್ನಡಿಗರ ಅಭಿಮಾನದ ಬಗ್ಗೆ ಪ್ರಶ್ನಿಸುವವರು ಯಾವುದೇ ವೊಲ್ವೋ ಬಸ್ ಹತ್ತಿ ITPB ಗೆ ಹೋಗಿ ಅನುಭವಿಸಬೇಕು. ಎಲ್ಲ ಚಾನೆಲ್ ಗಳವರಿಗೂ ಕನ್ನಡವೇ ಬೇಕು. ರೇಡಿಯೋ ಸಿಟಿ ಇನ್ನೂ ಮಾರುಕಟ್ಟೆಯಲ್ಲಿದೆಯೆಂದರೆ ಕನ್ನಡಕ್ಕೆ ತಿರುಗಿದ್ದೇ ಕಾರಣ.

ಕನ್ನಡ ಪರ ಸಂಘಟನೆಗಳ ಮನವಿಗಳನ್ನು ತಿರಸ್ಕರಿಸಿ, ಬರೀ ಹಿಂದಿ ಹಾಡುಗಳನ್ನು ಕೇಳಿಸುತ್ತಿದ್ದ ರೇಡಿಯೋ ಸಿಟಿ ಅದಕ್ಕೆ ಕೊಟ್ಟ ಕಾರಣ - ಕನ್ನಡ ಹಾಡುಗಳಿಗೆ ಮಾರ್ಕೆಟ್ ಇಲ್ಲ ಎಂಬುದೇ ಆಗಿತ್ತು. ಮನೋ ಮೂರ್ತಿ - ಹರಿಕೃಷ್ಣ - ಕಾಯ್ಕಿಣಿ - ಭಟ್ - ವಿಜಯ್ ಪ್ರಕಾಶ್ - ಸೋನು ನಿಗಮ್ - ಚಿತ್ರಾ - ಶ್ರೇಯಾ - ಮುಂತಾದವರಿಂದ ಒಳ್ಳೆಯ ಹಾಡುಗಳಿಂದಾಗಿ ಈಗ ರೇಡಿಯೋ ತುಂಬೆಲ್ಲ ಕನ್ನಡವನ್ನೇ ಕೇಳಲು ಒಂಥರಾ ಖುಶಿ!!!