Tuesday 29 January 2008

ವಿಂಡ್ಸರ್ ಕ್ಯಾಸಲ್



















ಲಂಡನ್ನಿಗೆ ಬಂದಾಗಿನಿಂದ ಹೊರಗೆ ತಿರುಗಾಡಲಾರದೇ ಅದೇ ಆಫೀಸಿನ ಜಂಜಡಗಳಲ್ಲಿ ಮುಳುಗಿದ್ದವನಿಗೆ, ನನ್ನದೇ ಕಂಪನಿಯ ಇನ್ನೊಂದು ಪ್ರಾಜೆಕ್ಟಿನ ಗೆಳೆಯರು ಸಿಕ್ಕಾಗ ಒಂಥರಾ ಖುಷಿಯಾಗಿತ್ತು. ವಾರಾಂತ್ಯಗಳಲ್ಲಿ ಕ್ರಿಕೆಟ್, ಟೆನ್ನಿಸ್ ಆಡುವುದರಿಂದ ಬೆಳೆದ ಪರಿಚಯ, ಹೊರಗೆ ತಿರುಗಾಡಲೇನಿದೆಯೆಂದು ಚರ್ಚಿಸುವವರೆಗೆ ಬಂದಾಗ, ಏನೋ ಒಂದು, ಸ್ವಲ್ಪ ತಿರುಗಾಡಿದರೆ ಮನಸ್ಸಿಗೂ ಒಳ್ಳೆಯದು ಅನ್ನಿಸಿತ್ತು.

ಊರಾಚೆ ಹೋಗಲು ಇನ್ನೊಂದು ನೆವ ಅಂದರೆ- ಬಸ್ಸಿನಲ್ಲಿ ಪ್ರಯಾಣ. ಸರಿ, ಎಲ್ಲರೂ ಒಪ್ಪಿದ್ದು ವಿಂಡ್ಸರ್ ಕ್ಯಾಸಲ್. ಲಂಡನ್ನಿನಿಂದ ಬಸ್ಸಿನಲ್ಲಿ ಸುಮಾರು ಒಂದೂವರೆ ಗಂಟೆ ಪ್ರಯಾಣ. ಬೆಳಿಗ್ಗೆ ಹೊರಟಾಗ ಸುಮಾರು ಹತ್ತೂವರೆ. ಜನವರಿಯಲ್ಲಿ ಅಪರೂಪ ಎನಿಸುವ ಬೆಚ್ಚಗಿನ ಸೂರ್ಯ, ಬೆಂಗಳೂರನ್ನ ನೆನೆಸುವಂತ ಹಿತಕರವಾದ ವಾತಾವರಣವಿತ್ತು. ಜತೆಗೆ ಅತಿ ಪ್ರೀತಿಯಿಂದ ಕೊಂಡ ಎಸ್ ಎಲ್ ಆರ್ ಕ್ಯಾಮೆರಾ. ಒಣ ಹರಟೆ ಕೊಚ್ಚಲು ಗೆಳೆಯರು, ತಿನ್ನಲು ಚಿಪ್ಸ್, ಬಿಸ್ಕಿಟ್ ಗಳು. ಮೊದಲ ಬಾರಿಗೆ ರಿಜರ್ವೇಷನ್ ಇಲ್ಲದೆ ಪ್ರಯಾಣ ಮಾಡ್ತಾ ಇದ್ದಿದ್ದಕ್ಕೆ (ಇಲ್ಲಿ ಎರೆಡೆರಡು ವಿರೋಧಾಭಾಸಗಳು - ಒಂದು - ಈ ಪ್ರಯಾಣ ಇಂಗ್ಲೆಂಡಿಗೆ ಬಂದಾದಮೇಲಿನ ಕೇವಲ ಎರಡನೆಯದು. ಎರಡು- ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋದ ಸರ್ತಿ ಯಾವಾಗ ರಿಜರ್ವೇಷನ್ ಮಾಡ್ಸಿದ್ದೆ ಅನ್ನೋದು ನೆನಪಿಲ್ಲ :) ) ಸ್ವಲ್ಪ ಹಿಂಜರಿಕೆಯೂ ಇತ್ತು. ಅದೂ ಅಲ್ದೆ ಹಿಂದಿನ ದಿನ ವಿಂಡ್ಸರ್ ನ ಅಂತರ್ಜಾಲದಲ್ಲಿ ಜಾಲಾಡಿದಾಗ ಭಾನುವಾರಕ್ಕೆ ಟಿಕೆಟ್ ಇರ್ಲಿಲ್ಲ. ಹೀಗಾಗಿ ನಿರೀಕ್ಷೆಯೂ ಕಡಿಮೆಯೇ ಇತ್ತು. ಹೀಗೆ ಮಿಶ್ರ ಮನಸ್ಸಿನಿಂದ ವಿಕ್ಟೋರಿಯಾ ಸ್ಟೇಷನ್ ತಲುಪಿದಾಗ ೧೧ ಗಂಟೆ. ತಕ್ಷಣ ಬಸ್ ಸಿಕ್ಕಿತ್ತು. ಇಲ್ಲಿ ಬಸ್ಸಿನ ವ್ಯವಸ್ಥೆಯ ಬಗ್ಗೆ ಹೇಳಲೇಬೇಕು. ನಾವು ಕೊಂಡಿದ್ದು ಓಪೆನ್ ಟಿಕೆಟ್. ಅಂದ್ರೆ, ತಿರುಗಿ ಬರುವಾಗ ಯಾವ ಟೈಮಿನ ಬಸ್ಸನ್ನಾದರೂ ಏರಬಹುದು!
ಹೀಗೆ ಆರಂಭವಾದ ಪ್ರಯಾಣ ಅನಾಯಾಸವಾಗಿ ಶಾಲಾ ದಿನಗಳ ಪ್ರವಾಸ ನೆನಪಿಸಿತ್ತು! ನಮ್ಮದೇ ಆದ ಗುಂಪಿನಲ್ಲಿ ಹರಟೆ, ಕಾಲು ಜಗ್ಗುವುದು, ಹುಡ್ಗೀರ ಬಗ್ಗೆ ಮಾತು, ನೋಡಿದ ಸಿನಿಮಾಗಳು, ಪ್ರಾಜೆಕ್ಟ್ ಮ್ಯಾನೇಜರ್ ಗಳ ಬಗ್ಗೆ ದೂರು ಇವೇ ಮುಂತಾದುವುಗಳ ನಡುವೆ ಆಗಾಗ ಕ್ಲಿಕ್ಕಿಸುವ ಕೆಲಸವೂ ಮುಂದುವರೆದಿತ್ತು. ಕೊನೆಗೆ ಗಮ್ಯ ಸ್ಥಳ - ವಿಂಡ್ಸರ್ ತಲುಪಿದಾಗ ಹನ್ನೆರಡೂ ಕಾಲು. ಚಳಿಗಾಲದ ಚುಮು ಚುಮು ಬಿಸಿಲು, ದೂರದಿಂದಲೇ ಕಣ್ಸೂರೆಗೊಳಿಸುವ ರಾಜ(ಣಿ)ವಾಸ ಖಂಡಿತವಾಗಿಯೂ ಚಿತ್ರದುರ್ಗದ ನೆನಪು ಹಾಯಿಸಿತು. ಇಳಿದ ಕೂಡಲೆ ಸ್ಟಾರ್ ಬಕ್ಸ್ (ಶಾಂತಿ ಸಾಗರ್ ? :) ) ನ ಕಾಫಿ ಹೀರಿ ಟಿಕೆಟ್ ತೊಗೊಂಡಿದ್ದಾಯ್ತು.

ವಿಂಡ್ಸರ್ ನಲ್ಲಿರೋ ಈ ರಾಜರ ವಿಶ್ರಾಂತಿತಾಣದ ಮುಖ್ಯ ಆಕರ್ಷಣೆಯೆಂದರೆ ಗೋಲಾಕಾರವಾಗಿರುವ ಮಧ್ಯ ಸೌಧ. ಇಂದಿಗೂ ರಾಣಿಯ ಅಧಿಕೃತ ನಿವಾಸವಾಗಿರುವ ಈ ಕೋಟೆ ಸುಮಾರು ೧೦ ಶತಮಾನಗಳ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ. ಈ ಸಾವಿರ ವರ್ಷಗಳಲ್ಲಿ ಹಲವಾರು ಬಾರಿ ಬದಲಾವಣೆ ಕಂಡಿರುವ ಈ ಕೋಟೆ, ತನ್ನ ಸೌಂದರ್ಯವನ್ನೇನು ಕಳೆದುಕೊಂಡಿಲ್ಲ. ಗೋಲಾಕಾರದ ಮಧ್ಯ ಸೌಧವನ್ನು ರಕ್ಷಣೆಗೆಂದು ಕಟ್ಟಿಸಿದ್ದೆಂದು ಪ್ರತೀತಿ. ಈ ಮಧ್ಯ ಸೌಧವನ್ನು ದಾಟಿದರೆ ಕೋಟೆಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿದ್ದಾರೆ. ಮೇಲ್ಭಾಗದಲ್ಲಿ ರಾಜವಂಶದ ಖಾಸಗಿ ಕೋಣೆಗಳು, ರಾಜರುಗಳ ಅಧಿಕೃತ ಭೇಟಿಗೆಂದೇ ನಿರ್ಮಿಸಲ್ಪಟ್ಟಿರುವ ಕೋಣೆಗಳು, ವಿಹರಿಸಲು ಕಾಲ್ದಾರಿ, ಉದ್ಯಾನವನ ಮತ್ತು ಆಳುಗಳ ಕೋಣೆಗಳಿವೆ. ಗೋಲಾಕಾರದ ಮಧ್ಯ ಸೌಧ ಎರಡನೇ ವಿಭಾಗದಲ್ಲಿದೆ. ಇದರ ಕೆಳ ವಿಭಾಗದಲ್ಲಿ ಸೈನಿಕರ ಕೋಣೆಗಳು, ಒಂದು ಚರ್ಚ್ ಮತ್ತು ಪಹರೆ ನೀಡಲು ಸಹಾಯವಾಗುವಂತೆ ನಿರ್ಮಿಸಿದ ಸೌಧಗಳಿವೆ.

ಈ ಕೋಟೆ ವಿಶ್ರಾಂತಿ ತಾಣವಾದ್ದರಿಂದ ಭೇಟಿಗಳಿಗೆಂದು ಮೀಸಲಾಗಿದ್ದ ಕೋಣೆಗಳನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ವಿವಿಧ ಕಾಲಮಾನಗಳಲ್ಲಿ ಗೆದ್ದ, ಇಲ್ಲವೇ ಕಾಣಿಕೆಯಾಗಿ ಪಡೆದ ಅಪರೂಪದ ವಸ್ತುಗಳನ್ನ ಪ್ರದರ್ಶನಕ್ಕಿಡಲಾಗಿದೆ. ಅತಿ ಮುಖ್ಯವಾದದ್ದು - ಟಿಪ್ಪೂವಿನ ಕಿರೀಟ, ಖಡ್ಗ ಮತ್ತು ಯುದ್ಧವಸ್ತ್ರ. ಜೊತೆಗೆ ಟಿಪ್ಪೂವಿನ ಸಿಂಹಾಸನದಲ್ಲಿದ್ದ ಪೂರ್ಣವಾಗಿ ಬಂಗಾರದಲ್ಲಿ ನಿರ್ಮಿತ ಹುಲಿ. ಮೀರ್ ಸಾದಿಕ್ ನ ಮೇಲಿನ ಸಿಟ್ಟು ದುಪ್ಪಟ್ಟಾಯಿತು!!! ಹೀಗೇಕೆ ನಮ್ಮವರೇ ಕೈ ಕೊಡ್ತಾರೆ?

ಥಾಯ್ ಲ್ಯಾಂಡ ನ ವಜ್ರಖಚಿತ ಖಡ್ಗ, ಕೆರಿಬಿಯನ್ ದ್ವೀಪಗಳ ಖಡ್ಗಗಳು, ಸಾವಿರಾರು ಬಂದೂಕುಗಳು, ಅಷ್ಟೇ ಖಡ್ಗಗಳು, ವಿವಿಧ ವಿನ್ಯಾಸದ ಸಿಂಹಾಸನಗಳು, ಅಸ್ತ್ರಗಳನ್ನು ನೋಡಿದರೂ ಕೊನೆಗೆ ನೆನಪಿನಲ್ಲಿಳುದಿದ್ದು ಟಿಪ್ಪೂವಿನ ಆ ಕಿರೀಟ ಮತ್ತು ಬಂಗಾರದ ಹುಲಿ!! ಆಳಿದವರ ಮನೆಯಲ್ಲಿ ಆಳಿಸಿಕೊಂಡವರ ಸ್ವಾತಂತ್ರ್ಯದ ಹೋರಾಟದ ಕುರುಹುಗಳು!! ಮನಸ್ಸೇಕೋ ಸ್ವ್ಲಲ್ಪ ಅಲುಗಾಡಿತು.

ಈ ಹೊಯ್ದಾಟಗಳಲ್ಲೇ ಅಪಾರ್ಟ್ ಮೆಂಟ್ ಸುತ್ತು ಮುಗಿಸಿ ಕೋಟೆಯ ಕೆಳಭಾಗಕ್ಕೆ ಬಂದಿದ್ದೆವು. ಚರ್ಚ್ ನಲ್ಲಿ ಪ್ರವೇಶವಿರಲಿಲ್ಲ. ಕೆಳಭಾಗದ ಪ್ರಾಕಾರದ ಬಳಿ ಒಂದೈವತ್ತು ಫೋಟೋ ಕ್ಲಿಕ್ಕಿಸಿ ಮತ್ತೊಮ್ಮೆ ಸೂರ್ಯ ಪ್ರಕಾಶದಲ್ಲಿ ಆ ಭದ್ರ ಕೋಟೆಯ ಸೌಂದರ್ಯ ಸವಿದು, ಸೆರೆ ಹಿಡಿದು ಹೊರಬಂದಾಗ ಹೊಟ್ಟೆ ತಾನೂ ಬಂದಿದ್ದೇನೆ ಎಂದೆಚ್ಚರಿಸಿತ್ತು! ಪಿಜ್ಜಾ ಹಟ್ ನಲ್ಲಿ ಪಿಜ್ಜಾ ತಿಂದು ಬಸ್ ಗಾಗಿ ಕಾಯಲು ಹೊರಟಾಗ ನಾಲ್ಕೂವರೆ. ಐದು ಗಂಟೆಗೆ ಲಂಡನ್ನಿಗೆ ಬಸ್ಸಿತ್ತು. ಸರಿ ಹೇಗೂ ಟೈಮಿದೆಯಲ್ಲ ಅಂದು ಅಲ್ಲೇ ಎದುರಿಗಿದ್ದ ಪ್ಯಾರಿಶ್ ಚರ್ಚ್ ನೊಳಕ್ಕೆ ಹೊಕ್ಕಿದ್ದಾಯಿತು. ಬ್ರಿಟಿಶ್ ರಿಗೆ ತಮ್ಮ ಇತಿಹಾಸದ ಮೇಲೆ ಇನ್ನಿಲ್ಲದ ಪ್ರೀತಿಯ ಸಂಕೇತವಾಗಿ ಆ ಚರ್ಚ್ ನ ಕಿಟಕಿಗಳಲ್ಲಿ ಮುದ್ರಿಸಿದ್ದ ’೧೭೨೦ ರಲ್ಲಿ ಮೃತರಾದ ಇಂತಿಂಥವರ ಪತ್ನಿ ನೀಡಿದ ನೆನಪಿನ ಕಾಣಿಕೆ’ ಎಂಬತಹ ಬರಹಗಳು ’ಹೇ, ನೀನೂ ಸ್ವಲ್ಪ ಕಲಿ’ ಎನ್ನುವಂತಿದ್ದವು.

ಇಷ್ಟೆಲ್ಲ ತಿರುಗಾಡಿದ ಮೇಲೆ ಕಾಲು ಮಾತಾಡತೊಡಗಿ ಬಾಯಿ ಮುಚ್ಚಿಸಿದ್ದವು! ತಲೆಯಲ್ಲಿ ಇವೇ ವಿಚಾರಗಳ ಸುಳಿಯಲ್ಲಿ ಮುಳುಗಿದವನಿಗೆ ಲಂಡನ್ ಬಂದಾಗಲೇ ಎಚ್ಚರ!! ಪ್ರತಿ ಪ್ರವಾಸದ ತಿರು-ಪ್ರಯಾಣವೂ ಹೀಗೆಯೇ!! ಮರುದಿನ ಬೆಳಿಗ್ಗೆ ಮತ್ತದೇ ಆಫೀಸ್, ಅದೇ ಅಂಡರ್ ಗ್ರೌಂಡ್, ಅದೇ ಸೆಂಟ್ರಲ್ ಲೈನ್. ಆದರೆ ಈ ಕೋಟೆಗೆ ಇತ್ತ ಭೇಟಿ ಉತ್ಸಾಹ ತುಂಬಿತ್ತು. ಹಿಂದೆ ಒಮ್ಮೆ ನೋಡಿ ಮುಂದಡಿಯಿಡಿಸಿತ್ತು.

Monday 28 January 2008

ಇವಳೇ? ಇದೇ?




ಕಳೆದ ಒಂದು ವರ್ಷದಿಂದ ನನ್ನ ಜೀವನದಲ್ಲಿ ಬಂದಿಹಳು
ಕಪ್ಪು-ಬಿಳುಪಿನ ಇಟ್ಟಿಗೆಯ ಸುಂದರಿ.

ರಾತ್ರಿ ನಿದ್ದೆ ಬರದಾಗ ಬದಿಯಲ್ಲಿ ಕುಳಿತು
ನಿನಗಾಗೇ ನಾನಿದ್ದೇನೆ ಎಂದೆಚ್ಚರಿಸುತ್ತ,
ನಿದ್ದೆ ಬರದೇ ಕರೆದಾಗ ಬಳಿಬಂದು
ತನ್ನಂತರಂಗವ ತೆರೆದು ನನಗೊಪ್ಪಿಸುವ ಬಿಂದು

ಮುಂಜಾವಿನಲಿ ತಪ್ಪದೇ ಎಬ್ಬಿಸಿ
ನವೋಲ್ಲಾಸ ತುಂಬಿಸಿ ದಿನ ಪ್ರಾರಂಭಿಸಲು
ನೆರವಾಗಿ ಮತ್ತೆ ಜಗತ್ತಿಗೆ ನನ್ನನ್ನು ತಂದಿರಿಸಿ
ಜಗದ ವೇಗದ ಜೊತೆ ಏಗುವ, ಏಗಿಸುವ ಜೀವನದ ಹೊನಲು

ವ್ಯವಸ್ಥೆಯ ಅವ್ಯವಸ್ಥೆಯನ್ನು ಕೆಲವೊಮ್ಮೆ ಪತ್ರಮುಖೇನ
ಮತ್ತೆ ಕೆಲವೊಮ್ಮೆ ಗಂಟಿಲಿಂದ ಕಿರುಚಿ,
"ಬರಿ ನಿನ್ನೊಳಗಿನ ಸುಳಿಯಲ್ಲಿರದೇ
ಅವರನ್ನೂ ನೋಡು" ಎನ್ನುವ ಸುರುಚಿ.

ಕಳೆದ ಒಂದು ವರ್ಷದಿಂದ ನನ್ನ ಜೀವನದಲ್ಲಿ ಬಂದಿಹಳು
ಕಪ್ಪು-ಬಿಳುಪಿನ ಇಟ್ಟಿಗೆಯ ಸುಂದರಿ.
ಸ್ವಲ್ಪ ಭಾರ, ಆಗಾಗ ಕಿರಿ ಕಿರಿ,
ಆದರೂ ಬಿಟ್ಟಿರಲಾರೆ- ನನ್ನ "ಬ್ಲ್ಯಾಕ್ ಬೆರ್ರಿ"

Thursday 10 January 2008

ಏನೋ ಹೇಳಬೇಕೂಂತಿದ್ದೆ.... ಮರ್ತೇ ಹೋತು... :)

ನೀ ಬಿಡ್ಪಾ, ಕುಂತಲ್ಲೆ ಕುಂಡಿ ಮರೀತಿ... ನಾ ಸಣ್ಣವಿಂದ್ದಾಗಿಂದ್ಲು ಕೇಳ್ಕೊತ ಬಂದಿದ್ದಂದ್ರ ಇದ... ನನಗ ಮರೆಯೋ ಚಟ. ಹಂಗಂತ ’ದಾರಿ ತಪ್ಪ್ಪಿದ ಮಗ’ ಪಿಚ್ಚರ್ ನಾಗ್ ರಾಜ್ ಕುಮಾರ್ ಮರ್ತಂಗ ಚಡ್ಡಿ ಹಾಕೋದೆನೂ ಮರೀತಿರ್ಲಿಲ್ಲ.. ಸಾಲಿಗೆ ಹೋಗೋ ಮುಂದ ಪೆನ್ ಮರಿಯೋದು, ಗುಂಡಾ ಆಡ್ಲಿಕ್ಕೆ ಹೋಗಾಗ ಕಮ್ಮಿ ತೊಗೊಂಡ್ ಹೋಗೋದು, ಆಶಾ ಪಟ್ಟು ತೊಗೊಂಡಿದ್ದ್ ರಿಸ್ಟ್ ಬ್ಯಾಂಡ್ ಮರ್ತು ಕ್ರಿಕೆಟ್ ಆಡ್ಲಿಕ್ ಹೋಗೋದು, ಕಿರಾಣಿ ತರ್ಲಿಕ್ಕ್ ಹೋಗೋ ಮುಂದ ಎಲ್ಲಾ ಲಿಸ್ಟ್ ಮಾಡಿ, ಚೀಟಿ ಮರ್ತಿದ್ದು... ಹಿಂಗ ಸಣ್ಣ - ಪುಟ್ಟ. ಅಷ್ಟ..

ಹಂಗಂತ ಪರೀಕ್ಷಾಕ್ ಹಾಲ್ ಟಿಕೆಟ್, ರಾತ್ರಿ ಬಸ್ಸಿಗೆ ರಿಜರ್ವೇಶನ್ ಟಿಕೆಟ್, ಸಿನೆಮಾಕ್ಕ ರೊಕ್ಕ, ಟ್ಯುಶನ್ ಹೋಮ್ ವರ್ಕ್ - ಎಂದೂ ಮರ್ತಿಲ್ಲ. ಇಷ್ಟಕ್ಕ ನನ್ನ ಮರ್ ಗೂಳಿ ಅನ್ನೋದು ಸರಿಅಲ್ಲ ಅಂತ ನನಗನಸ್ತದ.

ಅಲ್ಲಾ, ಆ 6 ನೇತ್ತಾ ಇದ್ದಾಗ ಸ್ಕೌಟ್ಸ್ - ಗೈಡ್ಸ ರಾಲಿ ಆದಾಗ, ಆ ನೀಲಿ ಬಣ್ಣದ ಸ್ಕಾರ್ಫ್ ಮರ್ತಿದ್ದೆ, ಅದೂ ಕಡೀ ದಿನ.. ಪಾಟೀಲ್ ಮಾಸ್ತರು ಬೇರೆ ತಂದ್ ಕೊಟ್ರು - ಬಚಾವಾದೆ. ಆದ್ರೂ ಮಜಾ ಇತ್ತ್ ಅದು. ನಾ 6 ನೇತ್ತಾ, ಆದ್ರೂ ಲೀಡರ್ :). ಮಕ್ಳು - ಆ 7 ನೇತ್ತಾದವ್ರಿಗೆ ಮಸ್ತ್ ಹೊಡ್ಚಂಗಾಗಿತ್ತು.


ಅದ್ಕೂ ಮುಂಚಿನ್ ವರ್ಷ - 5 ನೇತ್ತಾದಾಗ್ - ಆ ನವೋದಯ ಪರೀಕ್ಷಾಕ್ಕಂತ ಫೋಟೋ ತಗಿಸ್ಕೋಬೇಕಾಗಿತ್ತು. ಹೋಗಿ ಹೋಗಿ ಕಿಶೇದಾಗ್ ಟೋಪನ್ ಇಲ್ದ ಬರೇ ಪೆನ್ ಇಟ್ಕೊಂಡ್ ಫೊಟೊ ತಗ್ಸ್ಕೊಂಡಿದ್ದಕ್ಕ ನಾ ಟೋಪನ್ ಮರ್ತಿದ್ದ ಕಾರಣ ಇರ್ಬೌದು- ಅದ್ರೂ ಅದೇನ್ ದೊಡ್ದ ಮರುವೇನ್?


ಕಾಕಾ ಹುಬ್ಬಳ್ಳ್ಯಾಗ್ ಮನಿ ಕಟ್ಸಿದ್ದ. ಗೃಹ ಪ್ರವೇಶಕ್ಕ್ ಹೋಗ್ಬೇಕಾದ್ರ ವಾರಗಟ್ಳೆ ಪ್ಯಾಕಿಂಗ್ ಮಾಡಿದ್ರು ಕೊನಿಗೆ ಬೆಲ್ಟ್ ಬಿಟ್ ಹೋದ್ಯಾ. ಅದಕ್ಕ ಮರಗೂಳಿ ಅನ್ನೊದೇನ್? (ಅಣ್ಣಗ್ ಮತ್ತೊಂದ್ 25 ರೂಪಾಯಿ ಟೊಪಿಗಿ :)

ಹೈಸ್ಕೂಲ್ ಪಂದ್ಯಾಟಕ್ಕಂತ ಬೆಳಗಾಲ್ ಪೇಟಿಗೆ ಹೋಗೋ ಮುಂದ ನೀ-ಕ್ಯಾಪ್ ಯಾಕ್ ಮರ್ತ್ನ್ಯೋ ಗೊತ್ತಿಲ್ಲ. ಮರ್ತಿದ್ದಂತು ಖರೆ. ಅಲ್ಲ, ಮರೀತೇನ್ ಅಂತ ಗೊತ್ತಿದ್ದಿದ್ರ ಮರೀತಿದ್ನೇನ್?


ಆಮ್ಯಾಲ, ಆ ಅಳಿಕೆ ಸಾಯಿ ಬಾಬಾ ಸಾಲಿಗೆ ಪರೀಕ್ಷಾ ಇದ್ದಾಗ್ ಟವೆಲ್ ಮರ್ತಿದ್ದೆ. ಹಂಗ ಪಿಯೂಸಿ ಆದ್ ಮ್ಯಾಲ ಹೊನ್ನಾವರದಾಗಿನ್ SDM ಕಾಲೇಜ್ ನಾಗಿನ್ ಪರೀಕ್ಷಾಕ್ ಹೋದಾಗ ಪೆನ್ ಮರ್ತಿದ್ದೆ. ಅಲ್ಲಿಂದ ಧಾರವಾಡ KCD ಎಂಟ್ರನ್ಸ್ ಫಾರ್ಮ್ ತುಂಬೋ ಮುಂದ ಫೋಟೂ ಮನ್ಯಾಗ ಬಿಟ್ಟಿದ್ದೆ. ಮನ್ಯಾಗ್ ಬಿಡೋದು, ಫೋಟೋ ನ ತಗಸ್ಕೊಂಡಿಲ್ಲ ಅನ್ನೋದಕ್ಕಿಂತ ಚೊಲೋ ಹೌದಿಲ್ಲೊ?


ಹೋಗ್ಗೋ ನಿನ್ನ, ICFAI ಎಂಟ್ರನ್ಸಿಗೆ ಅಂತ ಹೈದ್ರಾಬಾದಿಗೆ ಹೋದಾಗಂತೂ ಮಾರ್ಕ್ಸ್ ಕಾರ್ಡ್ ಜೆರಾಕ್ಸ್ ಮಾಡ್ಸೆ ಇರ್ಲಿಲ್ಲ.. ಆದ್ರ ಈ ಸರ್ತೆ ಫೋಟೋ ಮರ್ತಿರ್ಲಿಲ್ಲ. ಹೆ ಹೆ.


ಚೆನೈ ಬಿಟ್ ಬರೋ ಹೊತ್ತಿಗೆ ಒಂದೆರಡು ಪುಸ್ತಕ ಮರ್ತಿರ್ಬೌದು. ಹಂಗ, ಆ ಪ್ರೊಜೆಕ್ಟ್ ರಿಪೋರ್ಟ್ ಕೊಡೋ ದಿನ ಅದನ್ನ ಮರ್ತಿದ್ದೆ. ಮತ್ತ ಪ್ರಾಂಜಲ್ ಗ ಕಾಲ್ ಮಾಡಿ ತರ್ಸ್ಕೊಂಡೆ. ಆದ್ರ ಅವನ್ ನಂಬರ್ ಮರ್ತಿರ್ಲಿಲ್ಲ. ಖರೆ.

ದೀಪಾನ್ ಮದ್ವಿ. ಆ ಮಗಾ ವಿಕಾಸ್ ಗಡಿಬಿಡಿ ತಾ ಮಾಡಿ, ನನ್ನ ಮರ್ ಗೂಳಿ ಅಂತಾನ.. ಅಲ್ಲಾ, ಅವ ಗಡಿಬಿಡಿ ಮಾಡಿದ್ದಿಲ್ಲ ಅಂದ್ರ ನಾ ಯಾಕ್ ಉಡುಗೊರೆ ಮರೀತಿದ್ದೆ?

ದಿಲ್ಲಿಗೆ ಹೋದಾಗ ಸಂಜಿ ಚಾ ಕುಡಿಲಿಕ್ಕೆ ಅಂತ ಹೋದಾಗ ರೊಕ್ಕ ಮರ್ತಿದ್ದೆ. ಅಷ್ಟಕ್ಕ ಆ ಮಗ ಬಾಲಾ, ನನ್ನ ಕಂಜೂಸ್ ಅನ್ನೋದೇನ್? ಏನೋ ಚೊಲೋ ದೋಸ್ತ್ ಸಿಕ್ಕಾನ ಅಂತ ಸುಮ್ನಿದ್ದೆ.

ಕಡಿ ಸರ್ತಿ ಯಾವಾಗ್ ಮರ್ತಿದ್ದೆ? ನೆನಪಾಗ್ ವಲ್ದು. ಹಾಂ, ಇಲ್ಲಿ ಲಂಡನ್ನಿಗೆ ಬರೋ ದಿನ ಮನ್ಯಾಗ್ ಪರ್ಸ್ ಬಿಟ್ಟ್ ಬಿಟ್ಟಿದ್ದೆ. ಪಾಪ ಶರದ ಮತ್ತ ಏರ್ ಪೋರ್ಟಿಗೆ ಬಂದು ಕೊಟ್ಟಿದ್ದ...

ಹಿಂಗ ಸಣ್ಣ - ಪುಟ್ಟ ವಿಷ್ಯ ಮರಿಯೋದು ದೊಡ್ಡ ಅಪರಾಧ ಏನಲ್ಲ. ಮರಗೂಳಿ ಅಂತ ಕರ್ಸ್ಕೊಳ್ಳಿಕ್ಕೆ ಬೇರೆ ಲೆವೆಲ್ಲಿನ್ ಮರ್ವು ಬೇಕು ಅಂತ ನನ್ನ ಅನಿಸಿಕಿ. ಈಗ್ ನೋಡ್ರಿ, ಹೋದ್ ಡಿಸೆಂಬರ್ ನಿಂದ ಇದನ್ನ ಪೋಸ್ಟ್ ಮಾಡ್ಬೇಕಂತ ಅಂದ್ಕೊಂಡಿದ್ದೆ. ಸ್ವಲ್ಪ ಮರ್ತಿತ್ತು. ಇವತ್ತ ನೆನಪಾಗೇದ, ಮಾಡೇನಿ. ಅದಕ್ಕ ನನ್ನ ಮರಗೂಳಿ ಅನ್ನಬ್ಯಾಡ್ರ್ಯ ಮತ್ತ... ನಾ ಸುಮ್ನಿರೋ ಪೈಕಿ ಅಲ್ಲ.