Thursday 26 March 2009

ಉಗಾದಿ..

ಚೈತ್ರದ ಚಿಗುರು
ತೆನೆಯೊಡೆದ ಭತ್ತ
ಬಲಿತ ಮಾವು
ಫಲಿತ ಫಸಲು... ಬೆಲ್ಲ

ಶುರುವಾದ ಸುಡು ಬೇಸಗೆ
ಗಾಳಿ-ಧೂಳು
ಬಾವಿ ತಳ... ಬೇವು

ಅದು ಜೀವನ
ಇದುವೂ ಜೀವನ
ಎರಡರ ಮಧ್ಯ ಅಲ್ಲ-
ಎರಡರ ಮಿಶ್ರಣ, ಜೀವನ

ಹಿಂದಿನ ಬೇವಿನ ಕಲಿಕೆ
ನಾಳಿನ ಬಲ
ಬೆಲ್ಲದ ಒಲವು
ರವಿಕಿರಣ
ಎರಡೂ ಕಲೆತ ಇಂದು.... ಉಗಾದಿ...

Sunday 22 March 2009

ಹಳೆ ಪಾತ್ರೆ, ಹಳೆ ಕಬ್ಬಣ ಮತ್ತು emosanal ಅತ್ಯಾಚಾರ್!!

ಇತ್ತೀಚಿಗೆ ಊರಿಗೆ ಹೋದಾಗ ಎಲ್ಲೆಲ್ಲೂ ಕೇಳಿದ ಕನ್ನಡ ಹಾಡು - ಹಳೆ ಪಾತ್ರೆ, ಹಳೆ ಕಬ್ಬಣ, ಹಳೆ ಪೇಪರ್ ತರಹಾ ಈ... ಪರ-ವಿರೋಧಿ ವಾದಗಳನ್ನು ಕೆರಳಿಸಿದ ಈ ಹಾಡು, ನಮ್ಮೂರಲ್ಲಿ ತುಂಬಾ ಪ್ರಸಿದ್ಧಿ ಪಡೆದಂತಿತ್ತು. ಸಾಹಿತಿ ಯೋಗರಾಜ್ ಭಟ್ ನಮ್ಮೂರಿನ ಹುಡುಗ ಎನ್ನುವುದಕ್ಕಿಂತಲೂ, ಮುಂಗಾರು ಮಳೆ ಯಶಸ್ಸಿನ ನಂತರ ಆತ ತಿಳವಳ್ಳಿಯ (ಅವರು ಹುಟ್ಟಿ ಬೆಳೆದ ಊರ, ಹಾವೇರಿ ಜಿಲ್ಲೆಯಲ್ಲಿದೆ) ಹೆಸರು ಎತ್ತದೇ ತಾನು ಕುಂದಾಪುರದ ಬಳಿಯವರು ಎಂದಿದ್ದು ಮತ್ತು, ಈ ಸಾಹಿತ್ಯಕ್ಕೆ ಸಿಕ್ಕ ವ್ಯಾಪಕ ನೆಗೆಟಿವ್ ಪ್ರಚಾರ, ಎರಡೂ ಸೇರಿ ಅವರನ್ನು ಆಡಿಕೊಳ್ಳಲು ಉಪಯೋಗಿಸಲ್ಪಟ್ಟಿತ್ತು ಈ ಹಾಡು!

ಭಟ್ಟರ ಹುಡುಗ ಹದಗೆಟ್ಟ ಹೋಗ್ಯಾನ!! ಎಂಥಾ ಮನಿ ಹುಡುಗ ಇಂಥಾ ಹಾಡು ಬರೀತಾನ್ ಅನ್ಸಿರ್ಲಿಲ್ಲ ಬಿಡ್ರಿ ಅನ್ನೋದು ಸಾಮಾನ್ಯವಾಗಿತ್ತು. ಆದರೂ ಜನ ಗುನುಗುನಿಸ್ತಾ ಇದ್ದಿದ್ದು ಇದೇ ಹಾಡು! ಕನ್ನಡ ಸಾಹಿತ್ಯಿಕ ವೆಬ್ ತಾಣಗಳಲ್ಲೂ ಇದರ ಪರ-ವಿರೋಧಿ ಚರ್ಚೆಗಳಾದವು. ಹಿರಿ ನಟ ರಾಜೇಶ್ ಇದನ್ನ ಪ್ರಬಲವಾಗೇ ಖಂಡಿಸಿ ಖೇದ ವ್ಯಕ್ತಪಡಿಸಿದ್ದರು. ಅದೇ ಸಮಯಕ್ಕೆ ಪರವಾಗಿಯೂ ವಾದಗಳು ಅನೇಕ ಬ್ಲಾಗ್ ಗಳಲ್ಲಿ ಪ್ರಕಟವಾದವು.

ಅದೇನೆ ಇರಲಿ, ಒಂದು ಚಿತ್ರ ಸಾಹಿತ್ಯ ಇಷ್ಟರ ಮಟ್ಟಿಗೆ ಚರ್ಚೆಗೆ ಗ್ರಾಸವಾಗುವಂತೆ ಮಾಡಿದ್ದು ಯೋಗರಾಜ್ ರ ಸಾಧನೆಯೇ! ಅವರ ಸಾಹಿತ್ಯಕ್ಕೆ ಬೇಡಿಕೆಯೂ ಹೆಚ್ಚಿದೆಯಂತೆ.

ಇದನ್ನ ಬರಿ ಕನ್ನಡ ಚಿತ್ರ ಸಾಹಿತ್ಯದ ಪರಿಧಿಯಲ್ಲಿ ನೋಡದೆ, ಮತ್ತು ಬರಿ ಇದರ ಬಗ್ಗೆ ಬರೆಯದೆ, ಇದು ಹುಟ್ಟು ಹಾಕಿದ ಈ ಮಂಥನವನ್ನು ಇನ್ನೊಂದು ಮಜಲಿನಿಂದ ನೋಡಬೇಕೆನ್ನಿಸಿದ್ದು, ದೇವ್ - ಡಿ ಎಂಬ ಹೊಸ ಹಿಂದಿ ಚಿತ್ರದ ಮತ್ತೊಂದು ತುಂಬಾ ಪ್ರಸಿದ್ಧವಾದ ಹಾಡು ಕೇಳಿದಾಗ. ತೇರಾ emosanal ಅತ್ಯಾಚಾರ್ ಎನ್ನುವ ಈ ಹಾಡಿನ ಸಾಹಿತ್ಯ ಎಷ್ಟು ಕಚಡವಾಗಿದೆಯೆನ್ನುವುದು, bol, bol why did you ditch me, whore, ಎನ್ನುವ ಸಾಲಿಂದ ತಿಳಿಬಹುದು.

ಹಿಂದಿ ಭಾಷಿಕರ ಸಂಖ್ಯೆ ಜಾಸ್ತಿ ಇರಬಹುದು. ಆ ಭಾಷೆಯ ವ್ಯಾಪ್ತಿ ಜಾಸ್ತಿ ಇರಬಹುದು. ಆದರೆ, ಎಲ್ಲೂ ಈ ಸಾಹಿತ್ಯದ ಬಗೆ, ಇದು ನಮ್ಮ ಸಂಸ್ಕೃತಿಯನ್ನು ಕೆಡಿಸುವ ಬಗ್ಗೆ ಅಥವಾ ಈ ಸಾಹಿತ್ಯದಿಂದ ಮಕ್ಕಳ, ಯುವಕರ ಮೇಲೆ ಆಗಬಹುದಾದ ದುಷ್ಪರಿಣಾಮದ ಮೇಲೆಯಾಗಲಿ ಯಾವುದೇ ರೀತಿಯ ಚರ್ಚೆ, ಕಾಮೆಂಟ್ ಕೇಳಿಲ್ಲ/ಓದಿಲ್ಲ. ಅದೇ ಒಂದು ಕನ್ನಡದ, ಇದೇ mode ನಲ್ಲಿರುವ ಹಳೆ ಪಾತ್ರೆ ಹುಟ್ಟು ಹಾಕಿದ ಆ ಚರ್ಚೆ, ಕನ್ನಡದಲ್ಲಿ, ಕರ್ನಾಟಕದಲ್ಲಿ ಇನ್ನೂ ಆ ಕಳಕಳಿ, ಪ್ರಭುದ್ಧತೆ ಇದೆ ಎನ್ನುವುದನ್ನು ಸಾಬೀತು ಪಡಿಸಿದೆ ಎನ್ನುವುದು ನನ್ನ ಅಭಿಪ್ರಾಯ.

ಸಾಹಿತ್ಯವನ್ನು ಪಕ್ಕಕ್ಕಿಟ್ಟು ನೋಡಿದರೆ, ಎರಡೂ ಹಾಡುಗಳು catchy ಸಂಗೀತ ಹೊಂದಿವೆ. ಹಾಗಾಗಿ ನಂಗೆ ಇವೆರಡೂ ಇಷ್ಟ!!