Monday 20 July 2009

ದೇವರಿಗೇಕೆ ಸೀಮೆ?

ಕಳೆದ ವಾರ ಬರ್ಮಿಂಗ್ ಹ್ಯಾಮ್ - ಬ್ಲ್ಯಾಕ್ ಪೂಲ್ ತಿರುಗಾಡಲೆಂದು ಹೋಗಿದ್ದೆ. ಅಲ್ಲಿನ ಬಾಲಾಜಿ ದೇವಸ್ಥಾನದ ಬಗ್ಗೆ ಇನ್ನೊಮ್ಮೆ ಗೀಚುವೆ. ಆದರೆ ಆ ದೇವಸ್ಥಾನದಲ್ಲಿ ನೋಡಿದ, ಅನುಭವಿಸಿದ ಒಂದು ವಿಷ್ಯದ ಬಗ್ಗೆ ಬರೀ ಬೇಕೆನಿಸಿತು.

ಗೆಳೆಯರೊಂದಿಗೆ ಕಾರಲ್ಲಿ ಗುಡಿ ತಲುಪಿದಾಗ ೧೧ ರ ಸಮಯ. ಜೊತೆಯಲ್ಲಿದ್ದವರೆಲ್ಲ ಉತ್ತರ ಭಾರತೀಯರು. ತುಂಬ ಚಂದದ ಗುಡಿ ಕಟ್ಟಿ ಕೊಂಡಿದ್ದಾರೆ ಇಲ್ಲಿನ ಭಾರತೀಯರು. ಅಲ್ಲಿದ್ದವರಲ್ಲಿ ಬಹುಪಾಲು ದಕ್ಷಿಣದವರೇ. ಜೊತೆಯಲ್ಲಿದ್ದ ಸಾರ್ಥಕ್ ನಿಗೆ ಒಂದೇ ವಿಸ್ಮಯ. ಪೂಜಾರಿಯೇಕೆ ಅರೆ ಬೆತ್ತಲು? ದಕ್ಷಿಣದಲ್ಲೇಕೆ ಈ ಥರ ಪೂಜಿಸುತ್ತಾರೆ? ದಕ್ಷಿಣದಲ್ಲಿನ ಪ್ರಸಿದ್ಧ ದೇವರು ಯಾವುದು? ಹೀಗೆ ಮುಂದುವರೆದಿತ್ತು ಅವನ ಪ್ರಶ್ನಾವಳಿ. ನನ್ನ ತಿಳುವಳಿಕೆಗೆ ತಕ್ಕ ಉತ್ತರ ಕೊಟ್ಟು ಮುಂದುವರೆದೆ. ಪ್ರಸಾದದ ಸಮಯದಲ್ಲಿ ನೆರೆದ ಗುಂಪಿನಲ್ಲು ಅದೇ ವಿಷಯ ಪ್ರಸ್ತಾಪವಾಯಿತು. ಅಲ್ಲಿ ಪೂಜಾವಿಧಿಯ ವಿವರಣೆ ಮತ್ತು ಅದರ ಹೋಲಿಕೆ ದಕ್ಷಿಣದೊಂದಿಗೆ. ಬರಿ ಮಂಡಿಯೂರಿ ನಮಸ್ಕರಿಸುವ ಅವರಿಗೆ ನನ್ನ ಸಾಷ್ಟಾಂಗ ನಮಸ್ಕ್ಯಾರ ಕಂಡು ಸ್ವಲ್ಪ ಆಶ್ಚರ್ಯವುಂಟಾಗಿತ್ತು. ಹಮಾರೆ ಯಹಾಂ ಐಸಾ ನಹಿ ಹೋತಾ ಹೈ... ಹಾಗೆ ಹೀಗೆ....

ಅದು ಅವರು ಹುಟ್ಟಿ ಬೆಳೆದ ಪ್ರದೇಶದ ರೀತಿಯೆಂದು ಸುಮ್ಮನಾಗಿ ನಮ್ಮ ಮುಂದಿನ ದಾರಿ ಹಿಡಿದು ಹೊರಟೆವು. ಹೋಗಿದ್ದು ಬ್ರಿಟನ್ ನಲ್ಲೇ ದೊಡ್ಡದಾದ ಗುರುದ್ವಾರಕ್ಕೆ. ಅಲ್ಲಿನ ಪೂಜಾವಿಧಿ ನೋಡಿ ಮತ್ತದೇ ಚರ್ಚೆ ಶುರುವಾಯಿತು. ಇಲ್ಲಿ ನಮಸ್ಕರಿಸುವ ರೀತಿ, ತಲೆ ಮೇಲೆ ಕಡ್ಡಾಯವಾಗಿ ಬಟ್ಟೆ ಧರಿಸಬೇಕೆಂಬ ನಿಯಮ, ಸಾಮೂಹಿಕ ಊಟ, ಹೆಂಗಸರಿಗೆ ಪ್ರತ್ಯೇಕ ಸ್ಥಳ ಮುಂತಾದ ವಿಷಯಗಳು ಚರ್ಚಿತವಾದವು.

ಇವು ಬರಿ ಚರ್ಚೆಯ ವಿಷಯಗಳಾಗಿದ್ದರೆ, ಮತ್ತು ಒಬ್ಬಿಬ್ಬರು ಈ ಥರ ಅಂದುಕೊಂಡಿದ್ದರೆ ವಯಕ್ತಿಕ ವಿಚಾರ ಎಂದು ಬಿಟ್ಟು ಬಿಡುತ್ತಿದ್ದೆ. ಆದರೆ ಇರುವ ಬಹುಪಾಲು ಉತ್ತರ ಭಾರತೀಯ ಗೆಳೆಯರು ಈ ಥರದ ಪ್ರಶ್ನೆ ಕೇಳಿದ್ದರು. ನನಗೆ ದಕ್ಷಿಣದ ದೇವರು-ದೇವಸ್ಥಾನ ಇಷ್ಟ ಇಲ್ಲ ಎಂದು ನೇರವಾಗಿ ಹೇಳದಿದ್ದರೂ (ದೇವರೆಂಬ ಭಯಕ್ಕೆ!!), ದಕ್ಷಿಣದವರಷ್ಟೇ ಅವರ ದೇವರೂ ನಮಗೆ ಹೊಂದಿಕೆಯಾಗಲ್ಲ ಅನ್ನುವಷ್ಟರ ಮಟ್ಟಿಗೆ ಭಾವನೆ ವ್ಯಕ್ತವಾಗಿತ್ತು.

ಹೀಗೇಕೆ ದೇವರಿಗೆ ಸೀಮೆಯ ಮೀಸಲಾತಿ? ಎಲ್ಲೇ ಹೋದರೂ ದೇವರು ದೇವರಲ್ಲವೇ?

ಈ ಜಗತ್ತನ್ನು ಅವನ ಕೃತಿಯೆಂದು ನಂಬಿದರೆ, ಈ ವಿರೋಧಾಭಾಸವೂ ಅವನದೇ ರಚನೆಯಂಬುದನ್ನೂ ನಂಬಬೇಕೆನಿಸುತ್ತದೆ. ಕೆಂಡಸಂಪಿಗೆಯಲ್ಲಿ ಓದಿ ತಿಳಿದ, ಇತ್ತೀಚಿಗೆ ಬಹುಪ್ರಭಾವಿತನಾಗಿರುವ, ನುಸ್ರತ್ ಫತೇ ಅಲಿ ಖಾನ್ ಅವರ ಗಾಯನದಲ್ಲಿರುವ ಒಂದು ಚೀಜ್ (ಕವ್ವಾಲಿ) ನೆನಪಿಗೆ ಬರುತ್ತಿದೆ. ’ತುಮ್ ಇಕ್ ಗೋರಖ್ ಧಂಧಾ ಹೋ’. ದೇವರನ್ನು ಅವನೇ ಸೃಷ್ಟಿ ಮಾಡಿರುವ ವಿರೋಧಾಭಾಸಕ್ಕೆ ಜರೆಯುತ್ತ ಅವನನ್ನು ಪ್ರಶಂಸಿವುವ ಈ ಚೀಜ್ ನ ಭಾವನೆ ಎಷ್ಟು ಸರಿಯಾಗಿದೆಯಲ್ಲವೇ?

Tuesday 7 July 2009

ಲಂಡನ್ನಿನ ಕೆಲ ಹುಚ್ಚು ಮುಖಗಳು....

ಮನುಷ್ಯರಿಗೆ ಹುಚ್ಚು ಇರ್ತವೆ. ಕೆಲವರಿಗೆ ಮಾತಾಡುವ ಹುಚ್ಚು, ಕೆಲವರಿಗೆ ತಿರುಗಾಟದ ಹುಚ್ಚು, ಇನ್ನು ಕೆಲವರಿಗೆ ಸಂಗೀತದ ಹುಚ್ಚು, ನಂಗೆ ಮರೆವಿನ ಹುಚ್ಚು. ನಾನೀಗ ಹೇಳ ಹೊರಟಿರುವುದು ಈ ತರಹದ ಹುಚ್ಚು ಅಲ್ಲ. ಸಾರ್ವಜನಿಕವಾಗಿ, ಊರಿನಲ್ಲಿ ಹಲವಾರು ಜನ ಒಂದೇ ವಿಚಾರದ ಬಗ್ಗೆ ಚರ್ಚಿಸುವುದಿದೆಯಲ್ಲ, ಅದು ನನ್ನ ದೃಷ್ಟಿಯಲ್ಲಿ ಒಂದು ಹುಚ್ಚೇ. ಕೆಲವರು ಇದನ್ನ ಪಾಸ್ ಟೈಮ್ ವಿಷಯಗಳೆನ್ನುತ್ತಾರೆ. ಆದರೆ ಈ ವಿಷಯಗಳು ಬಹಳಷ್ಟು ಜನರ ಮೇಲೆ ಪರಿಣಾಮ ಮಾಡಿ, ಬಹಳ ಕಾಲದ ವರೆಗೆ ಚರ್ಚಿಸಲ್ಪಡುವುದನ್ನು ನೋಡಿದ ಮೇಲೆ ನಾನದನ್ನು ಹುಚ್ಚೇ ಎನ್ನುತ್ತೇನೆ.

ಈ ತರಹದ ಹುಚ್ಚನ್ನು ಎಲ್ಲ ಕಡೆ ಗುರ್ತಿಸಬಹುದು. ನನ್ನ ಎರಡು ವರ್ಷದ ಲಂಡನ್ ವಾಸದಲ್ಲಿ ನಾನು ನೋಡಿದ, ಓದಿದ, ಅನುಭವಿಸಿದ ಕೆಲ ಲೋಕಲ್ ಹುಚ್ಚುಗಳ ಬಗ್ಗೆ ನನ್ನ ಕೊರೆತ...

೧. ಕ್ಲಬ್ ಫುಟ್ಬಾಲ್:- ಇದು ಲಿಸ್ಟ್ ನಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುವ ವಿಷಯ. ಫುಟ್ಬಾಲ್ ಬಗ್ಗೆ ಗೊತ್ತಿರುವವ ಬೇರೆ ಗ್ರಹದಿಂದ ಬಂದಿರುವವನಂತೆ ನೋಡುವ ಇಲ್ಲಿನ ಪ್ರತಿಯೊಬ್ಬರಿಗೂ ಒಂದು ಕ್ಲಬ್ ನ ಅಭಿಮಾನಿಯಾಗಿ ಅದನ್ನು ಬೆಂಬಲಿಸುವುದು ಒಂಥರಾ ’ಧರ್ಮ’ ಮತ್ತು ’ಕರ್ಮ’. ಆಫೀಸಿನಲ್ಲಿ, ಪಕ್ಕದಲ್ಲಿ ನ್ಯೂ ಕಾಸಲ್ ನ ಡೇವಿಡ್, ಮುಂದೆ ಹಾಟ್ ಸ್ಪರ್ಸ್ ನ ಜೇಸನ್, ಅವನ ಪಕ್ಕದಲ್ಲಿ ಆರ್ಸನಾಲ್ ನ ಕೆವಿನ್, ಅವನ ಮುಂದೆ ಎವರ್ಟನ್ ನ ಜಿಮ್, ಜಿಮ್ ನ ಪಕ್ಕದಲ್ಲಿ ಲಿವರ್ ಪೂಲ್ ನ ಸ್ಟೀವ್ ಇದ್ದರೆ, ಅವನ ಹಿಂದೆ ವೆಸ್ಟ್ ಹ್ಯಾಮ್ ನ ಮ್ಯಾಟ್ ಕೂತಿದ್ದಾನೆ. ಇವರೆಲ್ಲ ಒಂದೇ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುವವರು! ಇನ್ನೊಬ್ಬ ಸ್ಟೀವ್, ನೀಲ್ ಮತ್ತು ಇನ್ನೊಬ್ಬ ಡೇವಿಡ್ ನ ಬೆಂಬಲದಿಂದ ಜೇಸನ್ ನ ಹಾಟ್ ಸ್ಪರ್ಸ್ ಸ್ವಲ್ಪ ಸ್ಟ್ರಾಂಗ್!!
ಪ್ರೀಮಿಯರ್ ಲೀಗ್ ನಲ್ಲಿ ಆಡದ ಕ್ವೀನ್ ಪಾರ್ಕ್ ರೇಂಜರ್ಸ ನ ಸೈಮನ್ ಸ್ವಲ್ಪ ವೀಕ್. ಇವೆಲ್ಲದರ ನಡುವೆ ನಾವು ನಾಕು ಜನ ಭಾರತೀಯರಿರುವುದರಿಂದ ಮ್ಯಾನ್ ಯು ಬೆಂಬಲಿಗರೂ ಜಾಸ್ತಿ (ಭಾರತೀಯರಿಗೆ ಗೊತ್ತಿರುವ ಕ್ಲಬ್ ಒಂದೇ ತಾನೆ :) )

೨. ವೆದರ್!! :- ಇದನ್ನ ಹವಾಮಾನ ಎನ್ನಲು ನಂಗಿಷ್ಟ ಇಲ್ಲ. ಇದನ್ನ ವೆದರ್ ಅಂದರೇ ಅದರ ಹುಚ್ಚಿನ ಪ್ರಾಮುಖ್ಯತೆ ಉಳಿಯೋದು. ಛೇ, ಎಂಥ ಮಳೆ ಮಾರಾಯಾ ಬಿಡ್ತಾನೇ ಇಲ್ಲ. ನಾಳೆ ’ಸನ್ನಿ ಇಂಟರ್ವೆಲ್’ ಇದೆ. ಈ ವೀಕೆಂಡ್ ಗೆ ಬಿಸಿಲಿದೆ. ಈ ಸರ್ತಿ ಛಳಿಗಾಲ ಸೆಪ್ಟೆಂಬರ್ ಗೇ ಬಂದಿದೆ. 2006 ನ ಬೇಸಿಗೆಯಂತ ಬೇಸಿಗೆ ಕಂಡಿಲ್ಲ್ಲ. ಈ ಸರ್ತಿನೂ ’ವೆಟ್ ಸಮ್ಮರ್ರೇ’. ಹೀಗೆ ಎಲ್ಲೆ ಸಿಗಲಿ, ಎಲ್ಲೇ ಕುಡೀಲಿ, ಎಲ್ಲೇ ತಿನ್ನಲಿ, ವೆದರ್ ನ ಪ್ರಸ್ತಾಪ ಬರದಿದ್ದರೆ ಮಾತು ಸಾಗಲ್ಲ, ಮಾತು ಮುಗಿಯಲ್ಲ. ಅದೇನು ಹುಚ್ಚೋ

೩. ರಗ್ಬಿ :- ಇದು ಎರಡನೇ ಜನಪ್ರಿಯ ಕ್ರೀಡೆ. ಇಂಗ್ಲೆಂಡ್ ವಿಶ್ವಕಪ್ ವಿಜೇತರು. ಆದರೂ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಐರ್ಲ್ಂಡ್, ಆಸ್ಟ್ರೇಲಿಯದ ಜೊತೆ ಆಡುವಾಗ ಸೋಲುವುದು ಸಾಮಾನ್ಯ! ಎಲ್ಲಿ ತನಕ ಇದರ ಹುಚ್ಚು ಅಂದರೆ, ಮಗು ಹುಟ್ಟುವ ಒಂದು ದಿನ ಮುಂಚೆ ಸೌತ್ ಆಫ್ರಿಕಾಕ್ಕೆ ಹೋಗಿ ಮ್ಯಾಚ್ ನೋಡಿ ರಾತ್ರೋ ರಾತ್ರಿ ತಿರುಗಿ ಬಂದಿದ್ದ ಒಬ್ಬ ಮಹಾಶಯ!!

೪. NHS :- ಒಂದು ಕಾಲದಲ್ಲಿ ಜಗತ್ತಿಗೇ ಮಾದರಿಯಾಗಿದ್ದ ಆರೋಗ್ಯ ಇಲಾಖೆ ಇದು. ಇಲ್ಲಿ ಎಲ್ಲರಿಗೂ ಉಚಿತ ಆರೋಗ್ಯ ಸೌಲಭ್ಯ. ಅದಕ್ಕೇ ಏನೋ, ಆಸ್ಪತ್ರೆಗಳು ಯಾವಾಗಲೂ ಗಿಜಿಗಿಡುತ್ತಿರುತ್ತವೆ. ಇದರ ಬಗ್ಗೆ, ಸೌಲಭ್ಯದ ಬಗ್ಗೆ, ಸೌಲಭ್ಯದ ಕೊರತೆಯ ಬಗ್ಗೆ ಹರಟೆ ಕೊಚ್ಚುವುದು ಲಂಡನ್ನಿಗರ ಇನ್ನೊಂದು ಹುಚ್ಚುತನ. ಬೇರೆ ದೇಶಗಳಲ್ಲಿನ ಆರೋಗ್ಯ ಇಲಾಖೆ/ಸೌಲಭ್ಯಗಳ ಜೊತೆ ಹೋಲಿಸಿತ್ತ ಇಲ್ಲ ಟೀಕಿಸುವುದು, ಇಲ್ಲವೇ ಪ್ರಶಂಸಿವುದು ಸರ್ವೆ ಸಾಮಾನ್ಯ!

೫. ಅಂಡರ್ ಗ್ರೌಂಡ್, ಪ್ರವಾಸಿಗರು ಮತ್ತು ಸೈಕಲ್ ಹೊಡಿಯುವವರು :- ಸುಮಾರು ದಶಕಗಳ ಮೊದಲೆ ಒಂದು ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಲಂಡನ್ನಿನ ಜನರು ಹೊಂದಿದ್ದಾರೆ. ಭೂಮಿಯ ಕೆಳಗೆ ಹಾವುಗಳು ಸರಿದಂತೆ ಚಲಿಸುವ ರೈಲುಗಳು ಲಂಡನ್ನಿನ ಬೆನ್ನುಲುಬುಗಳು. ಇವು ನಿಂತರೆ ದಿನಕ್ಕೆ ಮಿಲಿಯಗಟ್ಟಲೆ ನಷ್ಟ! ಕಿಕ್ಕ್ರಿರಿದು ತುಂಬಿ ಚಲಿಸುವ, ಸ್ವಲ್ಪ ಮಳೆ ಜಾಸ್ತಿಯಾದರೆ ನಿಲ್ಲುವ, ಪ್ರತಿ ವಾರಾಂತ್ಯಕ್ಕೂ ರಿಪೇರಿಯೆಂದು ಸ್ಥಬ್ಧವಾಗುವ ಈ ವ್ಯವಸ್ಥೆಯ ಬಗ್ಗೆ ಬೈಯುವುದು ಇಲ್ಲಿ ಬಹಳ ಸಾಮಾನ್ಯ. ಹಾಗೆ, ಲಂಡನ್ ಒಂದು ಪ್ರಸಿದ್ಧ ಪ್ರವಾಸಿ ತಾಣ ಕೂಡ. ಇಲ್ಲೆ ಇರುವ, ಇಲ್ಲೇ ಕೆಲ್ಸ ಮಾಡುವ ಲಂಡನ್ನಿಗರಿಗೆ ಪ್ರವಾಸಿಗಳ ಪೌಂಡ್ ಗಳೇನೋ ಬೇಕು, ಆದರೆ ಪ್ರವಾಸಿಗಳು ಬೇಡ! ಈ ಜನ ಅದೇಕೆ ಕ್ಯಾಮೆರಾ ತೆಗೆದು ಎಲ್ಲೆಂದರಲ್ಲಿ ಫೋಟೋ ತೆಗೀತಾರೊ?, ಹೀಗೇಕೆ ನಿಧಾನವಾಗಿ ಚಲಿಸುತ್ತಾರೋ? ಇವರೇಕೆ ಕ್ಯಾಶುವಲ್ ಡ್ರೆಸ್ ಹಾಕ್ತಾರೋ? ಆ ಪಿಕಡಿಲ್ಲಿ ಸರ್ಕಸ್ ನಲ್ಲಿ ಅಷ್ಟೊಂದು ಜನ ಸೇರುವಂತಹುದು ಏನಿದೆಯೋ? ಹೀಗೇ ಲಂಡನ್ನ್ನಿಗರ ಗೊಣಗು ನಿಲ್ಲುವುದಿಲ್ಲ. ಇವೆರಡರ ಜೊತೆಗೇ ತಳಾಕು ಹಾಕಿಕೊಂಡಿರುವ ಇನ್ನೊಂದು ಪ್ರಾಣಿವರ್ಗ - ಸೈಕಲ್ ಹೊಡಿಯುವವರು. ಇವರಿಗೆ ಯಾವ ರೂಲ್ಸೂ ಅನ್ವಯಿಸುವುದಿಲ್ಲ. ಬರೀ ಡಿಕ್ಕಿ ಹೊಡಿತಾರೆ. ಫುಟ್ಪಾತ್ ಮೇಲೇ ಚಲಿಸುತ್ತಾರೆ. ಮೊನ್ನೆ ನನಗೆ ಒಬ್ಬ ಡಿಕ್ಕಿ ಹೊಡೆದ, ಇವತ್ತು ನನ್ನ ಸೈಕಲ್ ಕಳುವಾಯಿತು. ಈ ಮಳೆಯಿಂದಾಗಿ ನಂಗೆ ಅಂಡರ್ ಗ್ರೌಂಡೇ ಗತಿ. - ಈ ಲಂಡನ್ನಿಗರ ಗೊಣಗಾಟಕ್ಕೆ ಕೊನೆ ಇಲ್ಲ!!

೬. ಟ್ರಫಲ್ಗರ್ ಸ್ಕ್ವೇರ್ ನ ನಾಲ್ಕನೇ ಕಟ್ಟೆ (ಪ್ಲಿಂತ್): - ಟ್ರಫಲ್ಗರ್ ಸ್ಕ್ವೇರ್ ಲಂಡನ್ನಿನ ಅತಿ ಪ್ರಸಿದ್ಧ ತಾಣಗಳಲ್ಲೊಂದು. ನಾಲ್ಕೂ ದಿಕ್ಕಿನಲ್ಲಿ ಒಂದೊಂದು ಕಟ್ಟೆ ಇರುವ ಈ ಜಾಗದಲ್ಲಿ, ಮೂರು ಕಟ್ಟೆಗಳ ಮೇಲೆ ಒಂದೊಂದು ಸಿಂಹವಿದೆ. ನಾಲ್ಕನೇಯದನ್ನೇಕೋ ಖಾಲಿ ಬಿಟ್ಟಿದ್ದಾರೆ. ದುಡ್ಡಿರಲಿಲ್ಲ ಎನ್ನುವುದು ಪ್ರತೀತಿ. ಈ ಖಾಲಿ ಇರುವ ಕಟ್ಟೆಯ ಮೇಲೆ ಎಂತಹ ’ಆರ್ಟ್’ ಕೂರಬೇಕು ಎನ್ನುವುದು ಲಂಡನ್ನಿಗರ ’ಹಾಟ್ ಟಾಪಿಕ್’ ಗಳಲ್ಲೊಂದು!

೭. ಪ್ರವಾಸ! :- ಇಲ್ಲಿರುವ ದರಿದ್ರ ವಾತಾವರಣಕ್ಕೋ, ಇವರ ಹತ್ತಿರವಿರುವ ದುಡ್ಡಿಗೋ, ಮೊದಲಿಂದಲೂ ಜಗತ್ತನ್ನಾಳಿದ ಅನುಭವಕ್ಕೋ, ಒಟ್ಟಿನಲ್ಲಿ ಲಂಡನ್ನಿಗರ ಇನ್ನೊಂದು ದೊಡ್ಡ ಚಟ ಅಂದರೆ - ಜಗತ್ತು ಸುತ್ತುವುದು. ವರ್ಷದಲ್ಲಿ ಕನಿಷ್ಟ ಒಂದು ಬಾರಿ, ಯಾವುದಾದರೂ ಬೇರೆ ದೇಶಕ್ಕೆ ಹೋಗದ ಲಂಡನ್ನಿಗ ಲಂಡನ್ನಿಗನೇ ಅಲ್ಲ ಎನ್ನುವ ಮಟ್ಟಿಗೆ ತಿರುಗಾಡುತ್ತಾರೆ. ನಮ್ಮಾಫೀಸಿನಲ್ಲಿರುವ ಜೆನ್ನಿ ಹೋದ ವರ್ಷ, ಅಂದರೆ ಆರ್ಥಿಕ ಪರಿಸ್ಥಿತಿ ಅಷ್ಟು ಕೆಟ್ಟಾಗಲೂ, ೪ ಬಾರಿ ತಿರುಗಿ ಬಂದಳು. ಮಲೇಶಿಯ, ಆಸ್ಟ್ರೇಲಿಯ, ಇಜಿಪ್ತ, ಭಾರತ, ದುಬೈ, ಅಮೆರಿಕ್, ಆಫ್ರಿಕ ಮತ್ತು ಕೆಲ ಯುರೋಪಿಯನ್ ದೇಶಗಳು ಇಲ್ಲಿನವರಿಗೆ ಭಾರಿ ಪ್ರೀತಿಯ ತಾಣಗಳು. ಅರೆ, ಕೆರಿಬಿಯನ್ ದ್ವೀಪಗಳೂ ಕೂಡ! ಒಟ್ಟಿನಲ್ಲಿ ಎಲ್ಲಿಗಾದರೂ ಸೈ, ತಿರುಗಾಡಕ್ಕೆ ಎತ್ತಿದ ಕೈ!!

೮.(ಬೀರ್) ಕುಡಿಯೋದು!! :- ಅರೆ, ಇದರ ಬಗ್ಗೆ ಹೇಳದೇ ಲಂಡನ್ನಿನ ಹುಚ್ಚುಗಳು ಪೂರ್ತಿಯಾಗಲ್ಲ!! ಮೇಲಿನ ಎಲ್ಲ ವಿಷಯಗಳೂ ಚರ್ಚೆಯಾಗುವುದು ಕೈಯಲ್ಲಿ ಬೀರ್ (ಇಲ್ಲ ವೈನ್, ಇಲ್ಲ ವೋಡ್ಕ, ಇಲ್ಲ ಜಿನ್, ಇಲ್ಲ ವಿಸ್ಕಿ) ಇದ್ದಾಗಲೇ. ಕೆಲಸಕ್ಕೆ ಸೇರಿದರೆ, ಕೆಲ್ಸ ಬಿಟ್ಟರೆ, ಮದುವೆ ಆದರೆ, ಹುಟ್ಟಿದ ಹಬ್ಬಕ್ಕೆ, ಇಂಗ್ಲೆಂಡ್ ಸೋತರೆ, ಇಂಗ್ಲೆಂಡ್ ಗೆದ್ದರೆ, ಮಳೆ ಬಂದರೆ, ಬರದಿದ್ದರೆ, ಪ್ರವಾಸಕ್ಕೆ ಹೋದರೆ, ಹೋಗುವುದಿದ್ದರೆ, ಗುರುವಾರ ಬಂದರೆ, ಸಂಬಳದ ದಿನ, ಕ್ಲಬ್ ಸೋತರೆ, ಗೆದ್ದರೆ, ಕೊನೆಗೆ ಸೀನಿದರೂ ಕುಡೀತಾರೆ ಇಲ್ಲಿ ಜನ!! ನಾನಂತು ಇದನ್ನ ಇಲ್ಲಿಯ ರಾಷ್ಟೀಯ ಕ್ರೀಡೆ ಎನ್ನುತ್ತೇನೆ! ಅದೇನು ಹುಚ್ಚೋ?

೯.

೧೦. ಮೇಲಿನ ಎಲ್ಲವೂ, ಮತ್ತೊಂದಿಷ್ಟು ಕೂಡಿ ’ಫೇಸ್ ಬುಕ್’ ನಲ್ಲಿ ಅಪ್ ಡೇಟ್ ಮಾಡುವುದು ಇನ್ನೊಂದು ಹುಚ್ಚು. ಪ್ರೊಪೋಸ್ ಮಾಡುವುದು, ಕೈ ಕೊಡುವುದ್, ಟಾಂಟ್ ಮಾಡುವುದು, ದೋಸ್ತಿ ಮಾಡುವುದು, ಎಲ್ಲವೂ ಫೇಸ್ ಬುಕ್ ನಲ್ಲೇ!!

ಮೇಲಿನ ೯ ನೇ ಹುಚ್ಚು ಒಂಥರಾ ’ಖಾಲಿ ಜಾಗ ಭರ್ತಿ ಮಾಡಿ’ ತರಹ. ಇಲ್ಲಿ bbc ಯ ಫೀಸ್ ನಿಂದ ಪೆಟ್ರೋಲ್ ದರದ ವರೆಗೆ, ಹೀಥ್ರೂ ಏರ್ ಪೋರ್ಟ್ ನ ಐದನೆ ರನ್ ವೇ ಇಂದ ಬ್ಯಾಂಕ ಗಳಾ ಬೋನಸ್ ವರೆಗೆ - ಹೀಗೆ ಯಾವುದೇ ವಿಷಯವನ್ನ ಭರಿಸಬಹುದು!! :)

ನೀವೇನಾದರೂ ಲಂಡನ್ನಿಗೆ ಬಂದರೆ ಗಮನದಲ್ಲಿರಲಿ ಎಂದು ಸಣ್ಣ ಪ್ರಯತ್ನ.... :)