Friday 22 May 2009

ಕಾಯುತಿರುವೆ...

ಮಧುರ ಮುಂಜಾವಿನಲಿ
ಕೆದರಿದ ಕೂದಲಲಿ ಆಡಿಸಲೊಂದು ಕೈಗೆ,

ಏರುತಿರುವ ಸೂರ್ಯನಡಿ
ಜೊತೆಗೂಡಿ ಅಡಿಯಿಡುವ ಪಾದಕೆ,

ತೀರ ಕೆಂಪಗಾಗುವಲ್ಲಿ
ನೀರಾಗಿ ಕೆಂಪಾಗುವ ಕೆನ್ನೆಗೆ,

ಬೆಳ್ಳಿ ಬೆಳೆದಿಂಗಳಲ್ಲಿ
ಹೆಜ್ಜೆಯಲ್ಲಿ ಹೆಜ್ಜೆಯಿರಿಸುವ ಗೆಜ್ಜೆಗೆ...

Sunday 10 May 2009

ಮುಂದೇನು ಬರುವುದು?

೫ ನೇ ತರಗತಿಯಲ್ಲಿದ್ದಾಗ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಗೆ ನಮ್ಮನ್ನೆಲ್ಲ (ಸುಮಾರು ೧೦-೧೫ ವಿದ್ಯಾರ್ಥಿಗಳು) ತಯಾರಿಸಿದವರು - ಬಿರಾದಾರ್ ಗುರುಗಳು. ಇವತ್ತಿಗೂ ನಿತ್ಯ ನೆನೆಯಬೇಕಾದ ನೆಚ್ಚಿನ ಸರ್. ಅವರು ಅಂದು ದಿನಾ ೧೦-೧೨ ತಾಸಿನ ಆ ತಾಲೀಮು ನೀಡದೇ ಇದ್ದಿದ್ದ್ರೆ, ಇವತ್ತಿಗೆ ಈ ಜಗತ್ತು ನೋಡ್ತಾ ಇರ್ಲಿಲ್ಲ. ಎಲ್ಲರನ್ನು ತಮ್ಮ ಮನೆಯಲ್ಲಿ ಕಲೆ ಹಾಕಿ, ತಾವೇ ಗೈಡ್ ತರಿಸಿ, ನಿತ್ಯ ಗಣಿತ, ಭಾಷೆ, ರೀಸನಿಂಗ್ ಇತ್ಯಾದಿ ಕಲಿಸಿ, ಪರೀಕ್ಷೆ ಹತ್ತಿರ ಬಂದಂತೆ ದಿನವೂ ಅಣುಕು ಪರೀಕ್ಷೆ ನಡೆಸಿ, ತಿದ್ದಿ, ತೀಡಿ ಕೊನೆಗೆ ಯಾವ ಮಟ್ಟಿಗೆ ತಯಾರು ಮಾಡಿದ್ದರು ಅಂದ್ರೆ, ನಾವು ಪರೀಕ್ಷೆ ಬರೆದು, ಮುಗಿಸಿ, ಕೊಟ್ಟಿದ್ದ ಪ್ರಶ್ನೆಗಳನ್ನ ಬರೆದುಕೊಂಡು ಬಂದಿದ್ದೆವು! (ಪ್ರಶ್ನೆ ಪತ್ರಿಕೆ ಹೊರ ಹೋಗಲು ಬಿಡುತ್ತಿರಲಿಲ್ಲ). ಅವರ ಆ ನಿರೀಕ್ಷೆಯನ್ನ ನಿಜ ಮಾಡಲಿಲ್ಲ ಎನ್ನುವ ಕೊರಗು ಈಗಲೂ ಇದೆ. ಆದರೆ ಆ ನಿರಾಶೆ ನಮ್ಮನ್ನ ಹತ್ತಿಕ್ಕಲು ಬಿಡದೆ, ಮತ್ತೆ ಹುರುದುಂಬಿಸಿ, ಭವಿಷ್ಯದ ಬಗ್ಗೆ ಕನಸು ಕಟ್ಟಿ, ಎತ್ತರದ ಗುರಿ ಕೊಟ್ಟು, ಅದನ್ನು ತಲುಪಲು ಏಣಿಯಂತೆ ನಮ್ಮ ಬುದ್ಧಿಯನ್ನ ತಿದ್ದಿ ಮುನ್ನುಗ್ಗಿಸಿದ ಮಹಾನುಭಾವ ಅವರು.

ಅವರ ಶಿಕ್ಷಣ ಪದ್ಧತಿಯಲ್ಲೆ ಒಂದು ಡಿಸಿಪ್ಲಿನ್ ಇತ್ತು. ಅವರಲ್ಲಿರಲಿಲ್ಲ! ಅವರಿಂದ ಕಲಿತಿದ್ದು ಒಂದೆ, ಎರಡೆ? ಕಠಿಣವಾದ ಇಂಗ್ಲಿಷ್ ನಿಂದ, ವ್ಯಾಕರಣ, ಗಣಿತ, ದುಂಡಗಿನ (?) ಕೈ ಬರಹ, ರೀಸನಿಂಗ್, ಕೊನೆಗೆ ಕಬಡ್ಡಿ, ಖೊ ಖೊ ವರೆಗೆ! ಬರಿ ಹೊಲದ ಬದದ ಮೇಲಿನ ಮಣ್ಣಿನ ಗುಡ್ಡೆಯಂತಿದ್ದ ನಮ್ಮನ್ನೆಲ್ಲ ಹದ ಮಾಡಿ, ಈ ಜಗತ್ತಿಗೆ ಮುಂದಡಿಯಿಡಿಸಿದ ಕುಂಬಾರ ಅವರು.

ರೀಸನಿಂಗ್ ನಲ್ಲಿ ಒಂದು ಭಾಗ - ಮುಂದೇನು ಬರುವುದು? - ೪ ಚಿತ್ರಗಳನ್ನು ಕೊಟ್ಟು ಐದನೇದನ್ನು ಊಹಿಸುವುದು ಇದರ ತಿರುಳು. ಪರೀಕ್ಷೆಯ ದೃಷ್ಟಿಯಿಂದಷ್ಟೇ ಅಲ್ಲದೆ, ಜೀವನದಲ್ಲೂ ಅಳವಡಿಸಿಕೊಳ್ಳಬಹುದಾದ, pattern ಗುರ್ತಿಸಲು ಪ್ರೇರೇಪಿಸಿದ ಪಾಠ ಇದು. ಇಂತಹ ಅನೇಕ ವಿಷಯಗಳ ಬಗ್ಗೆ ಆ ಚಿಕ್ಕ ವಯಸ್ಸಿನಲ್ಲಿಯೇ ನಮಗೆ ಭದ್ರ ಬುನಾದಿ ಹಾಕಿ ಕೊಟ್ಟ ಬಿರಾದಾರ್ ಸರ್ ನಮಗೆಲ್ಲ ಪ್ರಾತಃಸ್ಮರಣೀಯರು.

ಬಿರಾದಾರ್ ಸರ್ ನಮ್ಮೂರಿಗೆ ವರ್ಗವಾಗಿ ಬಂದಿದ್ದು, ನಾನು ೪ ನೇ ತರಗತಿಯಲ್ಲಿದ್ದಾಗ, ೧೯೯೧ ರಲ್ಲಿ. ಅಲ್ಲಿಂದೀಚಿಗೆ ಅವರ ಗರಡಿಯಲ್ಲಿ ನೂರಾರು ಇಂಜಿನಿಯರ್ ಗಳು, ವೈದ್ಯರು, ಶಿಕ್ಷಕರು, MBA ಆದವರು, ಕೃಷಿಕರು, ಆಡಳಿತಗಾರರು ತಯಾರಾಗಿದ್ದಾರೆ. ತನ್ನ ಗದ್ದೆಯಲ್ಲಿ ಬೆಳೆಯುವ ಪ್ರತಿ ಪೈರೂ ಅಷ್ಟೆ ಉನ್ನತ ಬೆಳೆ ತೆಗೆಯಬೇಕೆಂದು ಹಂಬಲಿಸುವ ರೈತನಂತೆ ಬಿರಾದಾರ್ ಸರ್ ಇವತ್ತಿಗೂ ತಮ್ಮ ಶೈಕ್ಷಣಿಕ ಕೃಷಿ ನಡೆಸುತ್ತಿದ್ದಾರೆ, ಅದೇ ತಿಳವಳ್ಳಿಯಲ್ಲಿ. ಯಾವುದೇ ವಿದ್ಯಾರ್ಥಿ ಏನೇ ಆಗುವ ಮೊದಲು ಒಬ್ ಒಳ್ಳೆಯ, ಜವಾಬ್ದಾರಿಯುತ ನಾಗರೀಕನಾಗುವಂತೆ ಪ್ರೇರೇಪಿಸುವುದು ಅವರ ಈ ಯಶಸ್ಸಿಗೆ ಮೂಲ ಕಾರಣ ಎಂದು ನನ್ನ ಅನಿಸಿಕೆ.

ಅವರ ಕುಟುಂಬವೇ ಈ ಶಿಕ್ಷಣ ಕೃಷಿಗೆ ನಿಂತಿದೆ. ಅವರ ಮನೆಯವರು (ನಮ್ಮ ನೆಚ್ಚಿನ ಬಿರಾದಾರ್ ಮೇಡಮ್), ಅಳಿಯ ಬಸಣ್ಣ, ಹೀಗೆ ಎಲ್ಲರೂ ’ಕುಂಬಾರರೆ ಮತ್ತು ಅವರಲ್ಲಿ ಕಲಿತ ಎಲ್ಲ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಿದವರೇ ಮತ್ತು ಬೀರುತ್ತಿರುವವರೇ. ಮುತ್ತಿನಂಥ ಮೂರು ಮಕ್ಕಳು - ಇಬ್ಬರು ಇಂಜಿನಿಯರ್ ಗಳು ಮತ್ತೊಬ್ಬಾಕೆ ಡಾಕ್ಟರ್. ತುಂಬಿದ ಕೊಡ, ತುಂಬು ಕುಟುಂಬ.

ಬಿರಾದಾರ್ ಸರ್, ನಿಮ್ಮ ಈ ಶೈಕ್ಷಣಿಕ ತಪಸ್ಸು, ಕೃಷಿ ಹೀಗೇ ಮುಂದುವರೀಲಿ. ನಿಮ್ಮಿಂದ ಮತ್ತೂ ಸಾವಿರಾರು ಹೂವುಗಳರಳಲಿ. ಸಮಾಜಕ್ಕೆ ಮತ್ತಷ್ಟು ಒಳ್ಳೆ ನಾಗರಿಕರಲು ಸಿಗಲಿ. ನಮನ ಸರ್....