Sunday 13 September 2009

ರಾಂಗ್ ನಂಬರ್

ಮಂಗಳವಾರ ಅಕ್ಕಿ-ಆಲೂರು, ಗುರುವಾರ ಸ್ವಂತ ಊರು, ಶುಕ್ರವಾರ ಹಾನಗಲ್, ಶನಿವಾರ ಆನವಟ್ಟಿ, ಭಾನುವಾರ ದಾಸನಕೊಪ್ಪ - ಹೀಗೆ ವಾರಕ್ಕೊಂದು ಊರಿನ ಸಂತೆಯಲ್ಲಿ ಬೆಳ್ಳುಳ್ಳಿ ಮಾರಲು ಹೋಗುತ್ತಿದ್ದ ಮೌನೇಶನಿಗೆ, ಮೊಬೈಲ್ ಖರೀದಿಸಲು ತಿರುಗಾಟವಷ್ಟೆ ಅಲ್ಲದೆ, ಊರಲ್ಲೇ ಮೊಬೈಲ್ ಟವರ್ ಬಂದಿದ್ದು ಕಾರಣವಾಗಿತ್ತು. ಹಾವೇರಿ ಆರ್. ಟಿ. ಒ ನಲ್ಲಿ ಕೆಲಸ ಮಾಡುತ್ತಿದ್ದ ಬಶ್ಯಾ, ಟೆಂಪೋ ಓಡಿಸುತ್ತಿದ್ದ ಸುನ್ಯಾ, ಹಾರ್ಡ್ ವೇರ್ ಅಂಗಡಿಯ ವಿನಾಯಕ, ಬೇರೆ ಕಡೆಯಿಂದ ತಂದು ಲೀಟರಿಗೆ ೪ ರೂ. ಹೆಚ್ಚಿಸಿ ಪೆಟ್ರೋಲ್ ಮಾರುತ್ತಿದ್ದ ಈರೇಶಿ, ಮಲ್ಟಿ ನ್ಯಾಶನಲ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಊರಿಗೆ ಬರೋ ಸಾದಿಕ್ ಹೀಗೆ ಓರಗೆಯ ಎಲ್ಲರ ಬಳಿ ಮೊಬೈಲ್ ಇತ್ತು. ತಾನು ಹಿಂದುಳಿಯಬಾರದೆಂದು ಒಂದು ಮಂಗಳವಾರ ಆಲೂರಿಗೆ ಬದಲಾಗಿ ಹಾವೇರಿಗೆ ಹೋಗಿ ಮೌನೇಶಿಯೂ ಒಂದು ಮೊಬೈಲ್ ಖರೀದಿಸಿದ.



ಎಲ್ಲರೂ ಓರಗೆಯವರೆ. ಎಲ್ಲರೂ ಪಿಯೂಸಿ ಮುಗಿಸಿ ಮನೆಯ ವ್ಯಾಪಾರ ಮುಂದುವರೆಸಿದ್ದರು. ಮೊಬೈಲ್ ಯುಗದ ಆರಂಭದ ಅಬ್ಬರ ಜೋರಾಗೇ ಇತ್ತು. ಊರಲ್ಲಿ ಪಕ್ಕದ ಬೀದಿಯಲ್ಲಿದ್ದರೂ ಕಾಲ್ ಮಾಡಿ ಮಾತಾಡುವುದು, ಮಿಸ್ಡ್ ಕಾಲ್ ಮಾಡಿ ಟೈಮ್ ಹೊಂದಿಸಿ ಗಿರೀಶನ ಅಂಗಡಿ ಬಳಿ ಸೇರುವುದು, ಮೆಸೇಜ್ ಮಾಡಿ ನಂಬರ್ ತೆಗೆದುಕೊಳ್ಳುವುದು, ಇತ್ಯಾದಿ ಇತ್ಯಾದಿ... ಸ್ವಲ್ಪ ಬದಲಾವಣೆ ಇರಲಿ ಎಂದು ಇತ್ತೀಚಿಗೆ ಅಡ್ಡೆ ಬದಲಾಯಿಸಿ ಸುನ್ಯಾನ ಟೆಂಪೋದಲ್ಲಿ ಸೇರತೊಡಗಿದ್ದರು.



ಎಲ್ಲರ ಸಮಯ ಕೂಡಿಬಂದು ಒಂದಿನ ಗೋಕಾಕ್ ಫಾಲ್ಸ್ ಗೆ ಟ್ರಿಪ್ ಗೆ ಹೋಗುವುದೆಂದು ನಿರ್ಧರಿಸಿದರು. ಊರಲ್ಲಿ ಕುಡಿಯಲಾಗುವುದಿಲ್ಲವೆಂಬುದು ಮುಖ್ಯ ಕಾರಣ. ಹುಬ್ಬಳ್ಳಿಗೆ ಬರುತ್ತಲೇ ಶುರುವಾದ ಪಾನಸೇವನೆ, ಕಾರಲ್ಲೂ ಮುಂದುವರೆದಿತ್ತು. ಸವದತ್ತಿ ರೋಡಿನಲ್ಲಿರಬೇಕಾದರೆ ಶುರುವಾಯಿತು ಮೊಬೈಲ್ ಹೊಡೆದುಕೊಳ್ಳ್ಸಲು. ಕಾಲ್ ಬಂದಿದ್ದು ಸುನಿಲನ ಸೆಲ್ ಗೆ. ಮೊದಲಿಗೆ ಹೆದರಿಕೆ - ಮನೆಯವರದ್ದ್ಯಾರದ್ದೋ ಇರಬೇಕೆಂದು. ಆದರೆ ನಂಬರ್ ಪರಿಚಿತವಲ್ಲ. ಹೊಟ್ಟೆಯಲ್ಲಿ ಶಂಕರ ಬೇರೆ. ತಲೆ ಓಡುತ್ತಿಲ್ಲ, ತಿರುಗುತ್ತಿದೆ. ಕಾಲ್ ಕಟ್ ಮಾಡಿದ. ಮತ್ತೆ ರಿಂಗ್ ಆಯ್ತು. ಮತ್ತೆ ಕಟ್ ಮಾಡಿದ. ಹೀಗೆ ಮುಂದುವರೆದಿತ್ತು ಆಟ. ಇನ್ನೊಂದಿಷ್ಟು ಎಣ್ಣೆ ಬಿದ್ದಿದ್ದೇ ಇನ್ನಿಲ್ಲದ ಧೈರ್ಯ ಬಂತು. ಈ ಸರ್ತಿ ಎತ್ತುವುದೆಂದು ನಿರ್ಧರಿಸಿದರು. ಕಾರಿನ ಸಂಗೀತ ನಿಂತಿತ್ತು. ಆದರೆ ಕಾಲ್ ಬರಲಿಲ್ಲ. ತಲೆ ಕೆಟ್ಟು ತಾನೆ ಕಾಲ್ ಮಾಡಿದ. ’ಯಾರ್ರಿ ಮಾತಾಡೋದು.. ಯಾರ್ ಬೇಕಾಗಿತ್ತ್ರಿ?’ ಆ ಕಡೆಯಿಂದ ಹೆಣ್ಣಿನ ಧ್ವನಿ. ’ನಾನ್ ಶುಭ ಮಾತಾಡ್ತಿರೋದು. ಎಲ್ಲಿದಿಯ, ಏಕೆ ಕಾಲ್ ಎತ್ತುತ್ತಿಲ್ಲ?’ ಕಂಪ್ಲೆಂಟಿನ ಧ್ವನಿ. ’ನಾ ಹೊರಗ್ ತಿರ್ ಗಾಡಾಕ್ ಬಂದೀನ್ರಿ, ಗೋಕಾಕ್ ಕಡೆ ಹೊಂಟಿದ್ವ್ಯೆ, ಹಿಂಗಾಗಿ ಗೊತ್ತಾಗಿಲ್ಲ್ರಿ. ಯಾಕ್ ಕಾಲ್ ಮಾಡಿದ್ದ್ರಿ? ಗಾಡಿ ಎನಾರ ಭಾಡಿಗಿಗ್ ಬೇಕಿತ್ತೇನ್ರಿ? ಯಾವ್ ಊರ್ರಿ?’ ಸುನ್ಯಾನ ವ್ಯಾಪಾರಿ ಬುದ್ಧಿಗೆ ಯಾವುದೇ ಶೆರೆ ಹತ್ತುತ್ತಿರಲಿಲ್ಲ. ಅದು ಯಾವಾಗಲೂ ಎಚ್ಚರವಿರುತ್ತಿತ್ತು.

ಆದರೆ ಆ ಕಡೆಯ ಧ್ವನಿಗೆ ಕನ್ಫ್ಯೂಷನ್. ಈ ಭಾಷೆ ಹೊಸದು. ’ಏ, ಎನಾಯ್ತೋ ನಿಂಗೆ, ಈ ಭಾಷೆ ಎಲ್ಲಿ ಕಲ್ತೆ, ಅದು ಅಲ್ದೆ ಗೋಕಾಕ್ ಎಲ್ಲಿದೆಯೋ? ನೀನ್ ಅಲ್ಲಿಗೇಕೆ ಹೋಗ್ತಿದ್ದೀಯ? ಈ ರೀ ಅನ್ನೋದ್ ಯಾವಾಗಿಂದ ಕಲ್ತ್ಯೋ?’



ರಾಂಗ್ ನಂಬರ್ ಅಂತ ಹೊಳೆದಿದ್ದೇ ಆಗ. ಆದರೆ ಕಾಲ್ ಮಾಡಿದ್ದು ತಾನೇ ಆದ್ದರಿಂದ ಹೆಚ್ಚಿಗೆ ಮಾತು ಬೆಳೆಸದೇ ಕಟ್ ಮಾಡಿದ. ಹೊಟ್ಟೆಯಲ್ಲಿದ್ದ ಪರಮಾತ್ಮ ಎಲ್ಲರ ಮನಸ್ಸಲ್ಲೂ ಮಂಗನಾಟ ಶುರು ಮಾಡಿತ್ತು. ತಲೆಗೊಂದು ಮಾತು.”ಯಾವ್ದೋ ಮೈಸೂರ್ ಕಡೆ ಹುಡುಗಿಲೇ, ರಾಂಗ್ ನಂಬರ್ ಆಗಿತ್ತ, ಹಿಂಗಾಗಿ ಕಟ್ ಮಾಡೀದ್ಯಾ’ ಅಂದರೂ ಕೇಳಲು ತಯಾರಿಲ್ಲ.

ಅಂತು ಇಂತು ಗೋಕಾಕ್ ಜಲಪಾತ ನೋಡಿ ಬಂದಿದ್ದಾಯ್ತು. ಆದರೆ ಆ ನಂಬರ್ ನಿಂದ ಕಾಲ್ ಬರುವುದು ನಿಲ್ಲಲಿಲ್ಲ. ಒಂದು ವಾರ-ಹತ್ತು ದಿನದಲ್ಲಿ ಇಬ್ಬರೂ ಇನ್ನೊಬ್ಬರ ಬಗ್ಗೆ ಎಷ್ಟು ತಿಳ್ಕೋಬೇಕಿತ್ತೋ ಅದಕ್ಕಿಂತ ಜಾಸ್ತಿ ತಿಳಕೊಂಡಿದ್ದರು. ಅಥವಾ ಹಾಗೆ ಅಂದುಕೊಡ್ಡಿದ್ದರು. ಹೀಗೇ ಒಂದು ಸಂಜೆ ಸಿಕ್ಕಾಗ ಸುನ್ಯಾ ಈ ವಿಷಯದ ಪ್ರಸ್ತಾಪ ಮಾಡಿದ. ಅದೇ ಸಮಯಕ್ಕೆ ಕಾಲ್ ಬಂತು. ಈ ಸರ್ತಿ ಫೋನ್ ಎತ್ತಿದ್ದು ಮೌನೇಶಿ. ಅರ್ಧ ಗಂಟೆ ಮಾತಾಡಿದ! ಅದೇ ಮೊದಲು - ಅದೇ ಕೊನೆ, ಸುನ್ಯಾನ ನಂಬರಿಗೆ ಕಾಲ್ ಬರ್ಲಿಲ್ಲ.

ಈಗ ಮೌನೇಶಿ ಶುಭಾಳನ್ನು ಮದುವೆ ಆಗಿ ಆರು ತಿಂಗಳು!

Sunday 6 September 2009

ನೆನಪಾದೆ..

ಶೂನ್ಯದೆಡೆ ಮನಸ್ಸು
ಮುಖ ಮಾಡಿರಲು,
ಬೇರೆಡೆ ತಿರುಗಿಸಲು
ಮತ್ತೊಂದಿಷ್ಟು ಶೂನ್ಯಗಳ
ಹುಡುಕಾಟದಲ್ಲಿದ್ದಾಗ
ನೀ ನೆನಪಾದೆ..

ಇಲ್ಲಿರುವೆ ಇರುವೆಯಷ್ಟೇ,
ಅಲ್ಲಿರುವುದು ಇಲ್ಲಿರುವಷ್ಟೇ ನಿಜವೀಗ,
ನೀನಲ್ಲಿರುವುದೋ, ಇಲ್ಲಿರುವುದೋ,
ನಾವೆಲ್ಲಿರುವುದೆಂದು
ಹುಡುಕಾಟದಲ್ಲಿದ್ದಾಗ
ನೀ ನೆನಪಾದೆ...

ಇರುವನ್ನು ನೆನಪಿಸುವಂತೆ
ಕಣ್ರೆಪ್ಪೆ ಮಿಟುಕಿದಾಗ,
ಬಿಂದುವಿನಿಂದ ಬಿಂದುವಿಗೆ
ಶೂನ್ಯ ಚಲಿಸಿದಾಗ
ಬಿಂದುವಿನ ಹಿಂದೆ ಮನ ಅಲೆದಾಗ
ನೀ ನೆನಪಾದೆ...

ನೀ ನೆನಪಾದೆ,
ನೀನಿಲ್ಲಿರುವೆ, ನಾನಲ್ಲಿರುವೆ,
ನೀ ನನ್ನಲಿ, ನಾ ನಿನ್ನಲಿ
ನಾನು, ನೀನು ನಾವಾಗುವ ಪರಿಯಲ್ಲಿ
ನೀ ನೆನಪಾದೆ...