Saturday 6 June 2009

ಭಾರತ - ಪಾಕ್ ಕ್ರಿಕೆಟ್....

ಮೊನ್ನೆ ಜೂನ್ ೩ ಕ್ಕೆ ಟಿ-ಟ್ವೆಂಟಿ ವಿಶ್ವ ಕಪ್ ನ ವಾರ್ಮ್ ಅಪ್ ಪಂದ್ಯ, ಭಾರತ-ಪಾಕ್ ನಡುವೆ ಬ್ರಿಟ್ ಓವಲ್ ನಲ್ಲಿತ್ತು. ಕೊನೆಯಲ್ಲಿ ಆರಾಮಾಗಿ ಭಾರತ ಗೆದ್ದ ಈ ಪಂದ್ಯದಲ್ಲಿ, ಬರೀ ಅಭ್ಯಾಸ ಪಂದ್ಯವಾದರೂ ಹೌಸ್ ಫುಲ್ ಆಗಿದ್ದ ಸ್ಟೇಡಿಯಂನಲ್ಲಿದ್ದ ಆ ಉತ್ಸಾಹ, ಹುಮ್ಮಸ್ಸು, ಗದ್ದಲ, ಚೀರಾಟ - ಭಾರತ - ಪಾಕಿಸ್ತಾನಗಳ ನಡುವಿನ ವೈರತ್ವದ ಉದಾಹರಣೆಯಂತಿತ್ತು. It was electric!!

ಸಂಜೆ ೫.೩೦ ಕ್ಕೆ ಈ ಪಂದ್ಯವಿದ್ದರೂ ಅದಕ್ಕೂ ಮುಂಚೆ ಇದ್ದ ಹಾಲೆಂಡ್ - ಸ್ಕಾಟ್ಲೆಂಡ್ ಪಂದ್ಯದಲ್ಲೇ "ಜೀತೇಗಾ ಭೈ ಜೀತೇಗಾ...." ಮಂತ್ರ ಘೋಷಣೆಗಳು ಪ್ರಾರಂಭವಾಗಿದ್ದವು. ನೀರಸವೆನಿಸುತ್ತಿದ್ದ ಆ ಪಂದ್ಯದಲ್ಲಿ ಹಾಲೆಂಡ್ ಗೆಲುವಿನ ಹೊಸ್ತಿಲಲ್ಲಿ ಬಂದಾಗ ಅಚಾನಕ್ ಆಗಿ ಸ್ಟೇಡಿಯಂ ತುಂಬ ಗದ್ದಲ. ಪಾಪದ ಆ ಕ್ರಿಕೆಟ್ಟಿಗರೂ ಒಂದ್ಸಾರ್ತಿ ಕಣ್ಣುಜ್ಜಿಕೊಳ್ಳುವ ಪರಿಸ್ಥಿತಿ! ಯಾಕೆಂದು ನಾವು ಕಣ್ ಕಣ್ ಬಿಡಬೇಕಾದ್ರೆ ಗೊತ್ತಾಗಿದ್ದು- ದೊಡ್ಡ ಪರದೆಯಲ್ಲಿ ಧೋನಿ - ಯುವರಾಜ್ ಸಿಂಗ್ ರ ದರ್ಶನ!!! ಪಕ್ಕದಲ್ಲಿ ಕುಳಿತಿದ್ದ ಇಬ್ಬರು ಬಿಳಿಯರು ಕಕ್ಕಾ-ಬಿಕ್ಕಿ. ಒಬ್ಬ ಎದ್ದು ಇನ್ನೂ ಎರಡು ಬೀರ್ ತೊಗೊಂಡು ಬಂದ.

ಅರ್ಧ-ಬರ್ದ ಅನಿಸುತ್ತಿದ್ದ ಸ್ಟೇಡಿಯಂ, ಮ್ಯಾಚ್ ಶುರುವಾಗೋ ಹೊತ್ತಿಗೆ ಹೌಸ್ ಫುಲ್. ಗುಂಪುಗಳಲ್ಲಿ ಎರಡೂ ದೇಶಗಳ ಬೆಂಬಲಿಗರು.೫ ನೇ ಫ್ಲೋರ್ ನಲ್ಲಿದ್ದ ನಾವು, ಸುಮಾರು ೧೫ ಜನ, ಮಧ್ಯ ಸಿಕ್ಕಿಹಾಕಿಕೊಂಡಿದ್ದೆವು. ೪ ಭಾರತದ ತ್ರಿವರ್ಣ ಮತ್ತು ಭಾರತೀಯ ಕ್ರಿಕೆಟ್ಟಿನ ಶರ್ಟ್ ಹಾಕಿಕೊಂಡಿದ್ದರು ಜೊತೆಗಿದ್ದ ಗುಜರಾತಿಗಳು. ಇವ್ಯಾವೂ ಇಲ್ಲದ ನಾವು ನಾಕು ಜನ ಅವರ ಪ್ರಕಾರ under prepared to cheer. ಅವರಿಗೊಂದು ಥ್ಯಾಂಕ್ಸ್ ಹೇಳಿ ಬ್ಯಾಗಿಂದ ಪ್ಲ್ಯಾಸ್ಟಿಕ್ ಕಹಳೆ ತೆಗೆದೆವು. ಶಬ್ದಗದ್ದಲವಿಲ್ಲದ ಗುಂಪಿಗೆ ಬ್ಯಾಲನ್ಸ್ ಬಂದಿತ್ತು. ಅಕ್ಕ ಪಕ್ಕ ಬರೀ ಹಸಿರು ಟೀ-ಶರ್ಟ್ ಗಳೇ. ಒಂಟಿ ಚುಕ್ಕಿ ಹಸಿರು ಧ್ವಜಗಳೇ. ಪಕ್ಕದ ಕುರ್ಚಿಯಲ್ಲಿ ಪಾಕಿಸ್ತಾನದ ಒಂದು ಕುಟುಂಬ. ಈ ಕಡೆ ಇನ್ನೊಂದು ಮುಸ್ಲಿಮ್ ಕುಟುಂಬ. ಹಿಂದೆ ಗುಜರಾತಿಗಳು.

ಪಂದ್ಯ ಶುರುವಾಗೋ ಮೊದಲು ಶಾರೀರಿಕ ಕಸರತ್ತಿಗಿಳಿದ ಎರಡೂ ತಂಡಗಳಿಗೆ ಜಯಕಾರ ಹಾಕ್ತಿದ್ದಾರೋ ಇಲ್ಲ ಬೈತಿದ್ದಾರೋ ಎಂದು ಗೊತ್ತಾಗದ ಪರಿಸ್ಥಿತಿ. ಧೋನಿ, ಯುವರಾಜ್, ಇರ್ಫಾನ್, ಯೂಸುಫ್, ಭಜ್ಜಿ, ರೋಹಿತ್, ಇಶಾಂತ್ - ಒಬ್ಬೊಬ್ಬರಾಗಿ ಇಳಿದರು ಫೀಲ್ಡಿಗೆ. ಅಂತೆಯೇ ಅಫ್ರಿದಿ, ಮಲಿಕ, ಯುನಿಸ್, ತನ್ವಿರ್ ಗಳು ಕೂಡ. ಕೊನೆಗೂ ಶುರುವಾಯಿತು ಆಟ!

ಅದರ ಜೊತೆಗೇ ಶುರುವಾಗಿದ್ದು ಗದ್ದಲ. ಮೊದಲ ಫ್ಲೋರ್ ನಲ್ಲಿ ಮಿನಿ ಸ್ಕರ್ಟನಲ್ಲಿದ್ದವಳೊಬ್ಬ ಸುಂದರಿ ಒಂದು ಬ್ಯಾನರ್ ತೆಗೆದದ್ದೇ ತಡ, ಎರಡನೇ ಫ್ಲೋರನಲ್ಲಿದ್ದ ಪಾಕಿ ಬೆಂಬಲಿಗರಿಗೆ ಎಲ್ಲೋ ಬೆಂಕಿ ಇಟ್ಟ ಹಾಗಿತ್ತು. Q - Can Pak ever win against India in a world Cup match? A: NEVER!!. ಸತ್ಯವನ್ನೇ ಬರೆದಿದ್ದಳು ಆಕೆ. ಅಷ್ಟು ಸಾಕಗಿತ್ತು ಮೇಲಿನವರಿಗೆ. ಗಾಯದ ಮೇಲೆ ಬರೆ ಎಳೆದಂತೆ ಮೊದಲ ಓವರ್ ನಲ್ಲೇ ಒಂದು ವಿಕೆಟ್ ಬೇರೆ ಬಿತ್ತು. ಸ್ಟೇಡಿಯಂ ನಲ್ಲಿನ ಅಬ್ಬರ ಮುಗಿಲು ಮುಟ್ಟಿತ್ತು. ಹಾರುತ್ತಿದ್ದ ತ್ರಿವರ್ಣ ಕೆಳೆಗಿಳಿಯಲಿಲ್ಲ. ಮುಂದಿನ ೪ ಒವರ್ ಗಳಲ್ಲಿ ಪಾಕಿ ತಂಡ ೪೫ ರನ್ ಮುಟ್ಟಿದಾಗಲೂ! ಆದರೆ ಅಷ್ಟೊತ್ತಿಗೆ ಪಾಕಿ ಬೆಂಬಲಿಗರ ಗದ್ದಲ ಜಾಸ್ತಿ ಆಗಿತ್ತು. ಬೌಂಡರಿಯಲ್ಲಿದ್ದ ಇರ್ಫಾನ್ ರ ಪರಿಸ್ಥಿತಿ ಹೇಳತೀರದು. ಇಷ್ಟರಲ್ಲಿ ಹಿಂದೆ ಕುಳಿತಿದ್ದ ಬಿಳಿಯರು ನಾಕು ಬೀರ್ ಖಾಲಿ ಮಾಡಿ, ಮುಂದೇನು ಎಂಬ ಚಿಂತೆಯಲ್ಲಿದ್ದಂತಿತ್ತು.

ಅದಾದ ಮೇಲೆ ಯಾವಾಗ ೫ ಎಸೆತಗಳಲ್ಲಿ ೩ ವಿಕೆಟ್ ಬಿದ್ದವೋ, ನಮ್ಮ ಗದ್ದಲ ಮತ್ತೆ ಚಿಗುರಿತ್ತು. ಹಸಿರು ಟೀ-ಶರ್ಟ್ ಗಳಲ್ಲಿದ್ದವರನ್ನು ಕರೆ ಕರೆದು ಛೇಡಿಸಹತ್ತಿದ್ದರು. ಕೊನೆಗೆ ೧೫೮ ರನ್ ಗಳಾದಾಗ ಅವರ ಧ್ವನಿಯಲ್ಲಿ ಸ್ವಲ್ಪ ಜೀವ ಬಂತು.

It was turnign nasty in the stadium. ಕೊನೆಗೆ ಮೊದಲ ಫ್ಲೋರ್ ನಿಂದ ಭಾರತದ ಧ್ವಜ ಹಿಡಿದ ಒಬ್ಬ ಬಂದೇ ಬಿಟ್ಟ ಎರಡನೇ ಫ್ಲೋರ್ ಗೆ. ಒಬ್ಬನೇ. ಅಲ್ಲಿದ್ದಿದ್ದು ಸುಮಾರು ೩೦ ಜನ ಪಾಕಿಗಳು. ಅವರಿಗೆ ತಿನ್ನಲು ಕೊಟ್ಟು, ಸಮಾಧಾನ ಹೇಳುವಂತೆ ನಟಿಸಿ, ಗಾಯದ ಮೇಲೆ ಬರೆ ಎಳೆದು ಹೊರಟೇ ಹೋದ. ಅಸಹಾಯಕ ಪಾಕಿಗಳು!! ಮೇಲಿಂದ ನಾವು, ಕೆಳಗಿಂದ ಇನ್ನೊಂದು ಗುಂಪು ಕಾಡತೊಡಗಿತು.

ಅದೆಲ್ಲಿದ್ದನೂ, ಬಂದ ನನ್ನ ಸ್ನೇಹಿತನ ಆಫೀಸಿನಲ್ಲಿ ಕೆಲ್ಸ ಮಾಡುವ ಬ್ರಿಟ್-ಇಂಡಿಯನ್. ಅಲ್ಲಿ ತನಕ ನಾವಾಯಿತು ನಮ್ಮ ಗದ್ದಲವಾಯಿತು ಎಂಬತ್ತಿದ್ದ ನಮ್ಮ ಫ್ಲೋರ್ ನಲ್ಲಿ ಶುರುವಾಯಿತು ಅಬ್ಬರ. ಪಕ್ಕದಲ್ಲಿದ್ದ ಪಾಕಿ ಕುಟುಂಬ, ಅವರ ಪಕ್ಕದಲ್ಲಿದ್ದ ಇನ್ನಷ್ಟು ಪಾಕಿಗಳನ್ನ ಹರಿದು ಮುಕ್ಕಿಬಿಟ್ಟ ಮಹರಾಯ! Yo, your world cup is over man, start packing up. Why dont u sing the Pak song, come on, sing it. ಫುಲ್ ಬ್ರಿಟ್ ಆಕ್ಸೆಂಟನಲ್ಲಿ ಟಾಂಟ್ ಮಾಡುತ್ತಿದ್ದರೆ, ಒಂದು ಕ್ಷಣ ನಮಗೇ ಕರುಣೆ ಉಕ್ಕಿತ್ತು. ಕೊನೆಗೆ ಅವ ಹೊರಡಲು ಕಾರಣ ಸ್ವಲ್ಪ ಸೀರಿಯಸ್ಸಾಗಿತ್ತು! ಈ ಕಡೆ ಕುಳಿತಿದ್ದ ಇನ್ನೊಂದು ಮುಸ್ಲಿಮ್ ಕುಟುಂಬವನ್ನೂ ಬಿಡದಾದಾಗ, ಆ ಕುಟುಂಬದ ಹಿರಿಯ ಕೇಳಿದ್ದು ಒಂದೇ ಪ್ರಶ್ನೆ. ಈ ಸಲದ IPL ಗೆದ್ದಿದ್ದು ಯಾರು? ಇವ ಹೇಳಿದ ಹೈದ್ರಾಬಾದ್. ಅವ ಹೇಳಿದ ಅದು ನಮ್ಮೂರು. ನಾನಿಲ್ಲಿ ಬಂದಿರೋದು ನಿನ್ನ್ ಥರಾನೇ ಭಾರತವನ್ನು ಬೆಂಬಲಿಸಲು. ಒಂದು ಸಾರಿ ಹೇಳಿ ಹೊರಟ ಮಹಾನುಭಾವ! ಆದರೂ ಏಕೋ ನಮ್ಮಲ್ಲಿದ್ದ ಉತ್ಸಾಹ ಅವರಲ್ಲಿರಲಿಲ್ಲ.

ಭಾರತದ ಇನ್ನಿಂಗ್ಸ್ ನಮ್ಮ GDP ಥರಾನೆ ಏರಿಕೆಯಲ್ಲೇ ಇತ್ತು. ಓಪನಿಂಗ್ ಜೋಡಿ ಮಾಡಿದ ಮೋಡಿ ಮುಂದೆ ಪಾಕಿಗಳ ಸದ್ದಡಗಿತ್ತು. ನಮ್ಮ ಗದ್ದಲಕ್ಕೆ ಮಿತಿ ಇರಲಿಲ್ಲ. ಬಿಳಿಯರ ಬೀರ್ ಸೇವನೆ ಮುಂದುವರೆದಿತ್ತು. ಕೊನೆಗೆ ಆರಾಮಾಗಿ ಗೆದ್ದ ಭಾರತ ತಂಡ, ಸ್ಟೇಡಿಯಂ ಹೊರಗೆ ಕುಣಿದಾಟಕ್ಕೆ ಕಾರಣವಾಗಿತ್ತು. ಪಂದ್ಯ ಮುಗಿದಿದ್ದು ೯.೩೦ ಕ್ಕೆ ಆದರೂ, ಹೊರಗೆ ನಮ್ಮ ಗದ್ದಲ ಮುಗಿದಾಗ ೧೦.೩೦! ಮನೆಗೆ ಮುಟ್ಟಿದಾಗ ೧೧.೩೦.

ಒಟ್ಟಿನಲ್ಲಿ ಒಂದು ರೋಮಾಂಚಕ ಸಂಜೆ ಮುಗಿದಿತ್ತು! ಭಾರತ ಗೆದ್ದಿದೆ. ಹೀಗೆ ಗೆಲುವು ಮುಂದುವರೆದು ವಿಶ್ವ ಕಪ್ ನಮ್ಮಲ್ಲೇ ಉಳೀಲಿ.