Saturday, 23 August 2008
ಏನಾರ ಬರೀಬೇಕ್..
ಧಾರ್ವಾಡ್ ಭಾಷೆದಾಗ್ ಪಿಚ್ಚರ್:
ಇಲ್ಲಿ ತನ ಕನ್ನಡ್ ಸಿನೇಂದಾಗ್ ಧಾರ್ವಾಡ್ ಭಾಷಾ ಪಾವರ್ಸಿಲ್ಲಾ ಅಂದ್ರ ಸುಳ್ಳಾಗ್ತದ. ಆದ್ರ ಬರೇ ಅದ ಭಾಷಾ ಉಪ್ ಯೋಗ್ಸಿ ಯಾವ್ ಸಿನೇಮಾ ನು ಬಂದಿಲ್ಲ ಅನ್ನೋದು ಖರೆ. ಸಂತ ಶಿಶುನಾಳ ಷರೀಫ, ಗಾನಯೋಗಿ ಪಂಚಾಕ್ಷರಿ ಗವಾಯಿ, ನಾಗಮಂಡಲ ಹಿಂಗ ಕೆಲ್ವೊಂದು ನಮ್ ಕಡಿ ಕಥಿ ಇಟ್ಕೊಂಡಿರೋ ಸಿನೇಮ ಬಂದಾವು, ಆದ್ರು ನಡ್ ನಡುವ ಡೈರ್‍ಕ್ಟರ್ ಭಾಷಾ ಛಾಪು ಕಾಣ್ಸಿರ್ತದ.
ಮೂಡಲ ಮನೆ ಅಂತ ಧಾರವಾಹಿ ಏನೋ ಬಂದಿತ್ತು. ಅದ್ರಾಗು ’ಮನೆ’ ನ ಆತ ಹೊರ್ತು ’ಮನಿ’ ಆಗ್ಲಿಲ್ಲ.
ಬಿ.ವಿ.ಬಿ ಕಾಲೇಜಿನ್ ಹುಡುಗ, ಎಸ್.ಜೆ.ಎಮ್ ಕಾಲೇಜ್ ಹುಡುಗಿ. ಇಲ್ಲಾ ಕೆ.ಸಿ.ಡಿ ಹುಡುಗ, ಜೆ.ಎಸ್.ಎಸ್. ಹುಡುಗಿ. ಕಾಲೇಜ್ ಕಥಿ ಬ್ಯಾಡಾ ಅಂದ್ರ, ಬಿಜಾಪುರ್ ಹುಡುಗ ಕಿತ್ತೂರ್ ಹುಡುಗಿ. ನಡುವ ಗದಗ್ ರಾಜಕೀಯ. ಇಲ್ಲಾ ಸೌಂದತ್ತಿ ಹೀರೋ ಐ.ಏ.ಎಸ್ ಪಾಸಾಗಿ ಧಾರ್ವಾಡಕ್ಕ ಡಿ.ಸಿ ಆಗಿ ಬಂದು ಪಾಟೀಲ್ ಅನ್ನೋ ವಿಲನ್ ಅಟ್ಟ್ಯಾಡ್ಸಿ ಹೊಡ್ಯೋದು.. ಹಿಂಗ ಒಂದಿಷ್ಟು ವಿಚಾರ ಅವ. ನೋಡೋಣು..
ಹುಬ್ಬಳ್ಳಿ- ಭಾರತದ ಸಾಫ್ಟ್ ವೇರ್ ಬೇಸ್.
ಹುಡುಕ್ಯಾಡಿದ್ರ ಹತ್ರಾಗ್ ಒಬ್ಬರ ಧಾರ್ವಾಡ್ ಕಡಿ ಮನ್ಷ ಸಿಗೋ ಈ ಇಂಡಸ್ಟ್ರಿ, ನಮ್ ಹುಬ್ಬಳ್ಳ್ಯಾಗ್ ಯಾಕ್ ಬೆಳಿಬಾರ್ದು? ಕೇಶ್ವಾಪುರ ನ ವೈಟ್ ಫೀಲ್ಡ್, ಗೋಕುಲ್ ರೋಡ್ ನ ಎಲೆಕ್ಟ್ರಾನಿಕ್ ಸಿಟಿ ಮಾಡಿದ್ರ, ನವನಗರ ತನ್ ತಾನ ಕೋರಮಂಗಲ ಆಗ್ತದ. ಚನ್ನಮ್ಮ ಸರ್ಕಲ್ ಇನ್ನೊಂದು ಗಾಂಧಿ ನಗರ ಆಗಿ, ದೇಶ್ ಪಾಂಡೆ ನಗರ ಹೊಸ ಜಯನಗರ ಆಗ್ ಬಾರ್ದ್ಯಾಕ್?
ಹುಬ್ಬಳ್ಳಿ - ಬೆಂಗಳೂರು - 4 ತಾಸ್ನ್ಯಾಗ್ ಮುಟ್ಸೋ ಟ್ರೈನು..
ಇರೋ 400 ಕಿಲೋ ಮೀಟ್ರಿಗೆ 10 ತಾಸ್ ಯಾಕ್ ಬೇಕ್ ಪಾ? ತಾಸಿಗೆ 100 ಕಿ.ಮೀ ಓಡೋ ಅಂತ ಟ್ರೈನ್ ಹಾಕಿಶಿ, ಬೆಳಿಗ್ಗೆ 6 ಗಂಟೆ ಕ್ಕ ಹುಬ್ಬಳ್ಳಿ ಬಿಟ್ರ 10 ಗಂಟೆ ಕ್ಕ ಬೆಂಗಳೂರಾಗ್ ಇರ್ಬೇಕ್. ಎಷ್ಟೆಲ್ಲಾ ಕೆಲ್ಸ ಹಗುರಾಕ್ಕಾವ್.
ಹಿಂಗ ವಿಚಾರ ಮಾಡ್ಕೋತ ಕುಂತಾಗ ತಲಿ ಮತ್ತ ಮತ್ತ ಹುಬ್ಬಳ್ಳಿ-ಧಾರ್ವಾಡ್ ದ್ ಕಡೀನ ಸುತ್ತಾಡ್ತೇತಿ. ಹಿಂಗಾಗಿ ಮತ್ತೊಂದ್ ಛೊಲೋ ಬ್ಲಾಗ್ ತಪ್ಪಿ ಹೋಗ್ಬೌದು. ಹಂಗಂತ ವಿಚಾರ ನ ಮಾಡ್ಡಿದ್ರ ಹೆಂಗ? ನಿಮ್ಗೇನಾರ ಬೇರೇ ವಿಚಾರ ಬರಾಕತ್ತಿದ್ರ ಇಲ್ಲೇ ಗೀಚಿ ಹೊಗ್ರೆಲ... ಏನಂತೀರಿ?
Saturday, 14 June 2008
ಒಂದು ವಾರದ ಕೊನೆ..
ಶುಕ್ರವಾರ -
ಸಂಜೆ ವಿಜಯ ಕರ್ನಾಟಕದ ಇ-ಪೇಪರ್ ಪುಟಗಳನ್ನ ತೆರೆದು ಕೊನೆ ನಾಲ್ಕು ಪುಟಗಳನ್ನ ತಿರುವಿ (ಕ್ಲಿಕ್ಕಿಸಿ :) ) ಮುಗಿಸೋದು. ದಟ್ಸ್ ಕನ್ನಡ ದಲ್ಲಿ ಹೊಸ ಚಿತ್ರಗಳ ವಿವರ ಓದಿ, ಕನ್ನಡಿಗರು.ಕಾಂ ನಲ್ಲಿ ಆನ್ ಲೈನ್ ಚಿತ್ರ ಯಾವ್ದಿದೆ ಅಂತ ನೋಡೊದು. (ಈಗ ಬರ್ತಾ ಇಲ್ಲ). ಚಿತ್ರ ಚೆನ್ನಾಗಿದ್ರೆ ನೋಡೋದು. ಇಲ್ಲಾಂದ್ರೆ ಯಾವ್ದಾರ ಹಿಂದಿ ಇದ್ಯೆನೋ ಅಂತ ನೋಡಿ, ಹಿಡ್ಸಿದ್ರೆ ಮುಗ್ಸಿ, ಒಂದ್ ಸಲ ಆಫೀಸ್ ಮೇಲ್ ಮೇಲೆ ಕಣ್ಣಾಕಿ ಮಲ್ಗ್ತೀನಿ.
ಶನಿವಾರ -
ಬೆಳಿಗ್ಗೆ ಹೊಟ್ಟೆ ಚುರ್ ಗುಟ್ಟೋತಂಕ ಮಲ್ಗಿದ್ದು, ಬೇಕೋ ಬೇಡ್ವೋ ಅಂತ ಎದ್ದು, ಶಾಸ್ತ್ರಕ್ಕೆ ಸ್ನಾನ ಮಾಡಿ, 4 ಬ್ರೆಡ್ ಬಿಸಿ ಮಾಡಿ, ಹಾಗೇ ಫ್ಲಾಸ್ಕ್ ಅಲ್ಲಿರೋ ಚಹ ಬಗ್ಗಿಸಿ, ಕಾಟಾಚಾರದ ತಿಂಡಿ ಮುಗ್ಸೋದು. ಒಂದ್ಸರ್ತಿ ಆಫೀಸ್ ಮೇಲ್ ಮೇಲೆ ಕಣ್ಣಾಡಿಸೋದು.ಮನ್ಸಿದ್ರೆ ತಿರ್ಗಾಡಕ್ಕ್ ಹೋಗ್ತೀನಿ. ಇಲ್ಲಾಂದ್ರೆ... ಪವಡಿಸು ಪರಮಾತ್ಮ.... :)
ಶನಿವಾರ - ಸಂಜೆ
ವಿಜಯ ಕರ್ನಾಟಕದ ಇ-ಪೇಪರ್ ಪುಟಗಳನ್ನ ತೆರೆದು ಕೊನೆ ಸಂಪಾದಕೀಯ ಪುಟವನ್ನ ತಿರುವಿ (ಕ್ಲಿಕ್ಕಿಸಿ :) ) ಮುಗಿಸೋದು. ದಟ್ಸ್ ಕನ್ನಡ ದಲ್ಲಿ ಹೊಸ ಚಿತ್ರಗಳ ವಿವರ ಓದಿ, ಕನ್ನಡಿಗರು.ಕಾಂ ನಲ್ಲಿ ಆನ್ ಲೈನ್ ಚಿತ್ರ ಯಾವ್ದಿದೆ ಅಂತ ನೋಡೊದು. (ಈಗ ಬರ್ತಾ ಇಲ್ಲ). ಚಿತ್ರ ಚೆನ್ನಾಗಿದ್ರೆ ನೋಡೋದು. ಇಲ್ಲಾಂದ್ರೆ ಯಾವ್ದಾರ ಹಿಂದಿ ಇದ್ಯೆನೋ ಅಂತ ನೋಡಿ, ಹಿಡ್ಸಿದ್ರೆ ಮುಗ್ಸಿ, ಒಂದ್ ಸಲ ಆಫೀಸ್ ಮೇಲ್ ಮೇಲೆ ಕಣ್ಣಾಕಿ ಮಲ್ಗ್ತೀನಿ. :)
ಬ್ಲಾಗಿಸಲು ಶುರು ಮಾಡಿದಾಗ ಹೀಗೊಂದು ಬ್ಲಾಗ್ ನ ಬರೆದಿಟ್ಟಿದ್ದೆ. ಯಾಕೋ ಅದನ್ನ ಮುದ್ರಿಸಬೇಕೆಂದೆನಿಸಿ ಅದನ್ನ ಮುಂದುವರೆಸೋಣ ಎಂದು ಇವತ್ತು ಎತ್ತಿಕೊಂಡೆ. ಆದರೆ, ಒಂದ್ನಿಮಿಷ!, ಇದು ನಿಜವಾಗಿಯೂ ನನ್ನ ವಾರಂತ್ಯದ ದಿನಚರಿಯಾಗಿ ಉಳಿದಿದೆಯೇ? ಇದನ್ನ ಬರೆದಿಟ್ಟಾಗ, (ಸುಮಾರು 6-8 ತಿಂಗಳ ಹಿಂದೆ) ನಿಜವಾಗಿಯೂ ಇದೇ ಆಗಿತ್ತು, ಆದರೆ ಈಗ? ಮತ್ತೊಂದು ಮಂಥನಕ್ಕೆ ಎಡೆ ಮಾಡಿಕೊಡ್ತಾ ಇದೆ. ವಿ.ಕ. ದ ವೆಬ್ಸೈಟ್ ಕೈ ಕೊಡಕ್ಕೆ ಶುರು ಮಾಡ್ದಾಗಿಂದ ಅದನ್ನ ನೋಡೋದನ್ನ ಬಿಟ್ಟಿದೀನಿ. ದಟ್ಸ್ ಕನ್ನಡ ದ ಜೊತೆಗೆ ಕೆಂಡಸಂಪಿಗೆಯೂ ಜೊತೆಗೂಡಿದೆ. ಸ್ಟೇಜ್ 6 ಬಂದ್ ಆದಾಗಿಂದ ವಿಯೋಹ್ ಜತೆಗೂಡಿದೆ. ಚಳಿಗಾಲ ಮುಗಿದಿದ್ದರಿಂದ ಟೆನ್ನಿಸ್, ಕ್ರಿಕೆಟ್ ಶುರು ಆಗಿದೆ. ಹೊಸ ಕ್ಯಾಮೆರಾ ತೊಗೊಂಡಾಗಿಂದ ಹೊರಗೆ ತಿರುಗಾಟ ಜಾಸ್ತಿ ಆಗಿದೆ. ಆರ್ಕುಟ್ ನಲ್ಲಿ ಫೇಸ್ ಬುಕ್ ತರಹದ ಜಾಹಿರಾತು ಬರತೊಡಗಿದ ಮೇಲೆ ಅಕೌಂಟ್ ಮುಚ್ಚಿದೀನಿ. ಶ್ರೀವತ್ಸ ಜೋಶಿ ಯವರು ಕಳೆಸುವ ’ಪರಾಗ ಸ್ಪರ್ಶ’ದ ಜೊತೆಗೆ, ಮೆಚ್ಚಿನ ರವಿ ಬೆಳೆಗೆರೆಯ ’ಸೂರ್ಯ ಶಿಕಾರಿ’ ಯೂ ಸಿಗೋದ್ರಿಂದ ಕಾದು ಕಾದು ಓದ್ತೀನಿ.
ಹೀಗೆ ಏನೇನೋ ಕಾರಣಗಳಿದ್ರೂ, ದಿನಚರಿ ಬದಲಾಗಿಲ್ಲವೇ? ಹಾಗಾದ್ರೆ ನಾನೇಕೆ ಕೊರಗ್ತಾ ಇದ್ದೆ? ಅಂದ್ರೆ ಈಗ ಕೊರತೆ ಇಲ್ಲದೇ ಎಲ್ಲ ಸರಿಯಾಗಿ ಹೋಯಿತೆ? ಹೋಗಲಿ, ಈ ದಿನಚರಿ, ೫ ವರ್ಷಗಳ ಹಿಂದೆಯೂ ಇತ್ತೆ? ಇಲ್ಲ, ಮುಂದಿನ ವರ್ಷವೂ ಇರತ್ತೇ? ಇಲ್ಲ. ಬದಲಾವಣೆಯೊಂದೇ ಶಾಶ್ವತ ಅಂತ ಕೇಳಿದ್ದೆ, ಓದಿದ್ದೆ. ಅರ್ಥ ಆಗ್ಲಿಕ್ಕೆ, ಬ್ಲಾಗ್ ಬೇಕಾಯ್ತು!!
ಆದ್ರೆ ಒಂದು ಮಾತಂತೂ ನಿಜ, ಈ ಶನಿವಾರಗಳೇ ಹೀಗೆ. ಶುಕ್ರವಾರದ ತನಕ ಯಾವಾಗ ಬರತ್ತೋ ಅಂತ ಕಾಯೋದು.. ಬರ್ತಿದ್ದಂಗೆ ಯಾವಗ ಮುಗ್ದೋಗತ್ತೋ ಗೊತ್ತೆ ಆಗಿರಲ್ಲ. :)
Sunday, 6 April 2008
ಸುಂದರ ಸ್ಕಾಟ್ಲೆಂಡ್ ನ ಕೆಲ ಚಿತ್ರಣಗಳು...
ಐದು ಸೋದರಿಯರ ಸಂಗಮ....

Thursday, 14 February 2008
ಮತ್ತೊಂದಿಷ್ಟು ಸ್ವಗತ...
ಮಲ್ಲಿಗೆಯ ಗೆಳೆತನ ಬೆಳೆಸುವ,
ಕನಕಾಂಬರಿಯ ಮೇಲೆ ಕುಳಿತ ಚಿಟ್ಟೆಯೊಂದಿಗೆ
ಹರಟುತ್ತ, ತುಂತುರು ಹನಿಸಲು
ಮತ್ತೆ ಮಗುವಾಗುವ,
ಮನದ ಮೂಲೆಯೆಲ್ಲೆಲ್ಲೋ ಅಡಗಿರುವ,
ಆ ಕಣ್ಣರಳಿಸಿದ ಚಿತ್ರಪಟದ ಸುಂದರಿ,
ಇನ್ನೇನು ಹಾರಿ ಹೋದಳೆನ್ನುವಷ್ಟರಲ್ಲಿ
ಠಕ್ಕೆಂದು ಹಾಜರಾಗಿ ಹೈರಾಣಾಗಿಸುತ್ತಾಳೆ..
-------------------------------------------------------------------------
ಅಲೆಅಲೆಗಳೇರೇರಿ ಮೇಲೇರಿ
ಕಡಲಾಚೆ ಈಚೆಯ ಮರಳ ಹಸಿ ಮಾಡಿ
ಜಗ ಗೆದ್ದ ಸಂಭ್ರಮದಲ್ಲಿರುವ
ಸಾಗರಿಯ ಹಮ್ಮು ನನ್ನಲ್ಲೂ;
ಕಣ್ಬಿರಿಯುವ ಸೂರ್ಯ, ಹವೆಯ ತೇವ,
ಮರಳ ಗುಣ, ತೆಂಗಿನ ಗಾಳಿ, ಒಳಗಿನ ಸೆಳೆತ,
ನಾನಿಲ್ಲೆ, ಹಮ್ಮು ಇನ್ನೆಲ್ಲೋ!
---------------------------------------------------------------------------
Tuesday, 29 January 2008
ವಿಂಡ್ಸರ್ ಕ್ಯಾಸಲ್



ವಿಂಡ್ಸರ್ ನಲ್ಲಿರೋ ಈ ರಾಜರ ವಿಶ್ರಾಂತಿತಾಣದ ಮುಖ್ಯ ಆಕರ್ಷಣೆಯೆಂದರೆ ಗೋಲಾಕಾರವಾಗಿರುವ ಮಧ್ಯ ಸೌಧ. ಇಂದಿಗೂ ರಾಣಿಯ ಅಧಿಕೃತ ನಿವಾಸವಾಗಿರುವ ಈ ಕೋಟೆ ಸುಮಾರು ೧೦ ಶತಮಾನಗಳ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ. ಈ ಸಾವಿರ ವರ್ಷಗಳಲ್ಲಿ ಹಲವಾರು ಬಾರಿ ಬದಲಾವಣೆ ಕಂಡಿರುವ ಈ ಕೋಟೆ, ತನ್ನ ಸೌಂದರ್ಯವನ್ನೇನು ಕಳೆದುಕೊಂಡಿಲ್ಲ. ಗೋಲಾಕಾರದ ಮಧ್ಯ ಸೌಧವನ್ನು ರಕ್ಷಣೆಗೆಂದು ಕಟ್ಟಿಸಿದ್ದೆಂದು ಪ್ರತೀತಿ. ಈ ಮಧ್ಯ ಸೌಧವನ್ನು ದಾಟಿದರೆ ಕೋಟೆಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿದ್ದಾರೆ. ಮೇಲ್ಭಾಗದಲ್ಲಿ ರಾಜವಂಶದ ಖಾಸಗಿ ಕೋಣೆಗಳು, ರಾಜರುಗಳ ಅಧಿಕೃತ ಭೇಟಿಗೆಂದೇ ನಿರ್ಮಿಸಲ್ಪಟ್ಟಿರುವ ಕೋಣೆಗಳು, ವಿಹರಿಸಲು ಕಾಲ್ದಾರಿ, ಉದ್ಯಾನವನ ಮತ್ತು ಆಳುಗಳ ಕೋಣೆಗಳಿವೆ. ಗೋಲಾಕಾರದ ಮಧ್ಯ ಸೌಧ ಎರಡನೇ ವಿಭಾಗದಲ್ಲಿದೆ. ಇದರ ಕೆಳ ವಿಭಾಗದಲ್ಲಿ ಸೈನಿಕರ ಕೋಣೆಗಳು, ಒಂದು ಚರ್ಚ್ ಮತ್ತು ಪಹರೆ ನೀಡಲು ಸಹಾಯವಾಗುವಂತೆ ನಿರ್ಮಿಸಿದ ಸೌಧಗಳಿವೆ.
ಈ ಕೋಟೆ ವಿಶ್ರಾಂತಿ ತಾಣವಾದ್ದರಿಂದ ಭೇಟಿಗಳಿಗೆಂದು ಮೀಸಲಾಗಿದ್ದ ಕೋಣೆಗಳನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ವಿವಿಧ ಕಾಲಮಾನಗಳಲ್ಲಿ ಗೆದ್ದ, ಇಲ್ಲವೇ ಕಾಣಿಕೆಯಾಗಿ ಪಡೆದ ಅಪರೂಪದ ವಸ್ತುಗಳನ್ನ ಪ್ರದರ್ಶನಕ್ಕಿಡಲಾಗಿದೆ. ಅತಿ ಮುಖ್ಯವಾದದ್ದು - ಟಿಪ್ಪೂವಿನ ಕಿರೀಟ, ಖಡ್ಗ ಮತ್ತು ಯುದ್ಧವಸ್ತ್ರ. ಜೊತೆಗೆ ಟಿಪ್ಪೂವಿನ ಸಿಂಹಾಸನದಲ್ಲಿದ್ದ ಪೂರ್ಣವಾಗಿ ಬಂಗಾರದಲ್ಲಿ ನಿರ್ಮಿತ ಹುಲಿ. ಮೀರ್ ಸಾದಿಕ್ ನ ಮೇಲಿನ ಸಿಟ್ಟು ದುಪ್ಪಟ್ಟಾಯಿತು!!! ಹೀಗೇಕೆ ನಮ್ಮವರೇ ಕೈ ಕೊಡ್ತಾರೆ?
ಥಾಯ್ ಲ್ಯಾಂಡ ನ ವಜ್ರಖಚಿತ ಖಡ್ಗ, ಕೆರಿಬಿಯನ್ ದ್ವೀಪಗಳ ಖಡ್ಗಗಳು, ಸಾವಿರಾರು ಬಂದೂಕುಗಳು, ಅಷ್ಟೇ ಖಡ್ಗಗಳು, ವಿವಿಧ ವಿನ್ಯಾಸದ ಸಿಂಹಾಸನಗಳು, ಅಸ್ತ್ರಗಳನ್ನು ನೋಡಿದರೂ ಕೊನೆಗೆ ನೆನಪಿನಲ್ಲಿಳುದಿದ್ದು ಟಿಪ್ಪೂವಿನ ಆ ಕಿರೀಟ ಮತ್ತು ಬಂಗಾರದ ಹುಲಿ!! ಆಳಿದವರ ಮನೆಯಲ್ಲಿ ಆಳಿಸಿಕೊಂಡವರ ಸ್ವಾತಂತ್ರ್ಯದ ಹೋರಾಟದ ಕುರುಹುಗಳು!! ಮನಸ್ಸೇಕೋ ಸ್ವ್ಲಲ್ಪ ಅಲುಗಾಡಿತು.
ಈ ಹೊಯ್ದಾಟಗಳಲ್ಲೇ ಅಪಾರ್ಟ್ ಮೆಂಟ್ ಸುತ್ತು ಮುಗಿಸಿ ಕೋಟೆಯ ಕೆಳಭಾಗಕ್ಕೆ ಬಂದಿದ್ದೆವು. ಚರ್ಚ್ ನಲ್ಲಿ ಪ್ರವೇಶವಿರಲಿಲ್ಲ. ಕೆಳಭಾಗದ ಪ್ರಾಕಾರದ ಬಳಿ ಒಂದೈವತ್ತು ಫೋಟೋ ಕ್ಲಿಕ್ಕಿಸಿ ಮತ್ತೊಮ್ಮೆ ಸೂರ್ಯ ಪ್ರಕಾಶದಲ್ಲಿ ಆ ಭದ್ರ ಕೋಟೆಯ ಸೌಂದರ್ಯ ಸವಿದು, ಸೆರೆ ಹಿಡಿದು ಹೊರಬಂದಾಗ ಹೊಟ್ಟೆ ತಾನೂ ಬಂದಿದ್ದೇನೆ ಎಂದೆಚ್ಚರಿಸಿತ್ತು! ಪಿಜ್ಜಾ ಹಟ್ ನಲ್ಲಿ ಪಿಜ್ಜಾ ತಿಂದು ಬಸ್ ಗಾಗಿ ಕಾಯಲು ಹೊರಟಾಗ ನಾಲ್ಕೂವರೆ. ಐದು ಗಂಟೆಗೆ ಲಂಡನ್ನಿಗೆ ಬಸ್ಸಿತ್ತು. ಸರಿ ಹೇಗೂ ಟೈಮಿದೆಯಲ್ಲ ಅಂದು ಅಲ್ಲೇ ಎದುರಿಗಿದ್ದ ಪ್ಯಾರಿಶ್ ಚರ್ಚ್ ನೊಳಕ್ಕೆ ಹೊಕ್ಕಿದ್ದಾಯಿತು. ಬ್ರಿಟಿಶ್ ರಿಗೆ ತಮ್ಮ ಇತಿಹಾಸದ ಮೇಲೆ ಇನ್ನಿಲ್ಲದ ಪ್ರೀತಿಯ ಸಂಕೇತವಾಗಿ ಆ ಚರ್ಚ್ ನ ಕಿಟಕಿಗಳಲ್ಲಿ ಮುದ್ರಿಸಿದ್ದ ’೧೭೨೦ ರಲ್ಲಿ ಮೃತರಾದ ಇಂತಿಂಥವರ ಪತ್ನಿ ನೀಡಿದ ನೆನಪಿನ ಕಾಣಿಕೆ’ ಎಂಬತಹ ಬರಹಗಳು ’ಹೇ, ನೀನೂ ಸ್ವಲ್ಪ ಕಲಿ’ ಎನ್ನುವಂತಿದ್ದವು.
ಇಷ್ಟೆಲ್ಲ ತಿರುಗಾಡಿದ ಮೇಲೆ ಕಾಲು ಮಾತಾಡತೊಡಗಿ ಬಾಯಿ ಮುಚ್ಚಿಸಿದ್ದವು! ತಲೆಯಲ್ಲಿ ಇವೇ ವಿಚಾರಗಳ ಸುಳಿಯಲ್ಲಿ ಮುಳುಗಿದವನಿಗೆ ಲಂಡನ್ ಬಂದಾಗಲೇ ಎಚ್ಚರ!! ಪ್ರತಿ ಪ್ರವಾಸದ ತಿರು-ಪ್ರಯಾಣವೂ ಹೀಗೆಯೇ!! ಮರುದಿನ ಬೆಳಿಗ್ಗೆ ಮತ್ತದೇ ಆಫೀಸ್, ಅದೇ ಅಂಡರ್ ಗ್ರೌಂಡ್, ಅದೇ ಸೆಂಟ್ರಲ್ ಲೈನ್. ಆದರೆ ಈ ಕೋಟೆಗೆ ಇತ್ತ ಭೇಟಿ ಉತ್ಸಾಹ ತುಂಬಿತ್ತು. ಹಿಂದೆ ಒಮ್ಮೆ ನೋಡಿ ಮುಂದಡಿಯಿಡಿಸಿತ್ತು.
Monday, 28 January 2008
ಇವಳೇ? ಇದೇ?

ಕಪ್ಪು-ಬಿಳುಪಿನ ಇಟ್ಟಿಗೆಯ ಸುಂದರಿ.
ರಾತ್ರಿ ನಿದ್ದೆ ಬರದಾಗ ಬದಿಯಲ್ಲಿ ಕುಳಿತು
ನಿನಗಾಗೇ ನಾನಿದ್ದೇನೆ ಎಂದೆಚ್ಚರಿಸುತ್ತ,
ನಿದ್ದೆ ಬರದೇ ಕರೆದಾಗ ಬಳಿಬಂದು
ತನ್ನಂತರಂಗವ ತೆರೆದು ನನಗೊಪ್ಪಿಸುವ ಬಿಂದು
ಮುಂಜಾವಿನಲಿ ತಪ್ಪದೇ ಎಬ್ಬಿಸಿ
ನವೋಲ್ಲಾಸ ತುಂಬಿಸಿ ದಿನ ಪ್ರಾರಂಭಿಸಲು
ನೆರವಾಗಿ ಮತ್ತೆ ಜಗತ್ತಿಗೆ ನನ್ನನ್ನು ತಂದಿರಿಸಿ
ಜಗದ ವೇಗದ ಜೊತೆ ಏಗುವ, ಏಗಿಸುವ ಜೀವನದ ಹೊನಲು
ವ್ಯವಸ್ಥೆಯ ಅವ್ಯವಸ್ಥೆಯನ್ನು ಕೆಲವೊಮ್ಮೆ ಪತ್ರಮುಖೇನ
ಮತ್ತೆ ಕೆಲವೊಮ್ಮೆ ಗಂಟಿಲಿಂದ ಕಿರುಚಿ,
"ಬರಿ ನಿನ್ನೊಳಗಿನ ಸುಳಿಯಲ್ಲಿರದೇ
ಅವರನ್ನೂ ನೋಡು" ಎನ್ನುವ ಸುರುಚಿ.
ಕಳೆದ ಒಂದು ವರ್ಷದಿಂದ ನನ್ನ ಜೀವನದಲ್ಲಿ ಬಂದಿಹಳು
ಕಪ್ಪು-ಬಿಳುಪಿನ ಇಟ್ಟಿಗೆಯ ಸುಂದರಿ.
ಸ್ವಲ್ಪ ಭಾರ, ಆಗಾಗ ಕಿರಿ ಕಿರಿ,
ಆದರೂ ಬಿಟ್ಟಿರಲಾರೆ- ನನ್ನ "ಬ್ಲ್ಯಾಕ್ ಬೆರ್ರಿ"
Thursday, 10 January 2008
ಏನೋ ಹೇಳಬೇಕೂಂತಿದ್ದೆ.... ಮರ್ತೇ ಹೋತು... :)
ಹಂಗಂತ ಪರೀಕ್ಷಾಕ್ ಹಾಲ್ ಟಿಕೆಟ್, ರಾತ್ರಿ ಬಸ್ಸಿಗೆ ರಿಜರ್ವೇಶನ್ ಟಿಕೆಟ್, ಸಿನೆಮಾಕ್ಕ ರೊಕ್ಕ, ಟ್ಯುಶನ್ ಹೋಮ್ ವರ್ಕ್ - ಎಂದೂ ಮರ್ತಿಲ್ಲ. ಇಷ್ಟಕ್ಕ ನನ್ನ ಮರ್ ಗೂಳಿ ಅನ್ನೋದು ಸರಿಅಲ್ಲ ಅಂತ ನನಗನಸ್ತದ.
ಅಲ್ಲಾ, ಆ 6 ನೇತ್ತಾ ಇದ್ದಾಗ ಸ್ಕೌಟ್ಸ್ - ಗೈಡ್ಸ ರಾಲಿ ಆದಾಗ, ಆ ನೀಲಿ ಬಣ್ಣದ ಸ್ಕಾರ್ಫ್ ಮರ್ತಿದ್ದೆ, ಅದೂ ಕಡೀ ದಿನ.. ಪಾಟೀಲ್ ಮಾಸ್ತರು ಬೇರೆ ತಂದ್ ಕೊಟ್ರು - ಬಚಾವಾದೆ. ಆದ್ರೂ ಮಜಾ ಇತ್ತ್ ಅದು. ನಾ 6 ನೇತ್ತಾ, ಆದ್ರೂ ಲೀಡರ್ :). ಮಕ್ಳು - ಆ 7 ನೇತ್ತಾದವ್ರಿಗೆ ಮಸ್ತ್ ಹೊಡ್ಚಂಗಾಗಿತ್ತು.
ಅದ್ಕೂ ಮುಂಚಿನ್ ವರ್ಷ - 5 ನೇತ್ತಾದಾಗ್ - ಆ ನವೋದಯ ಪರೀಕ್ಷಾಕ್ಕಂತ ಫೋಟೋ ತಗಿಸ್ಕೋಬೇಕಾಗಿತ್ತು. ಹೋಗಿ ಹೋಗಿ ಕಿಶೇದಾಗ್ ಟೋಪನ್ ಇಲ್ದ ಬರೇ ಪೆನ್ ಇಟ್ಕೊಂಡ್ ಫೊಟೊ ತಗ್ಸ್ಕೊಂಡಿದ್ದಕ್ಕ ನಾ ಟೋಪನ್ ಮರ್ತಿದ್ದ ಕಾರಣ ಇರ್ಬೌದು- ಅದ್ರೂ ಅದೇನ್ ದೊಡ್ದ ಮರುವೇನ್?
ಕಾಕಾ ಹುಬ್ಬಳ್ಳ್ಯಾಗ್ ಮನಿ ಕಟ್ಸಿದ್ದ. ಗೃಹ ಪ್ರವೇಶಕ್ಕ್ ಹೋಗ್ಬೇಕಾದ್ರ ವಾರಗಟ್ಳೆ ಪ್ಯಾಕಿಂಗ್ ಮಾಡಿದ್ರು ಕೊನಿಗೆ ಬೆಲ್ಟ್ ಬಿಟ್ ಹೋದ್ಯಾ. ಅದಕ್ಕ ಮರಗೂಳಿ ಅನ್ನೊದೇನ್? (ಅಣ್ಣಗ್ ಮತ್ತೊಂದ್ 25 ರೂಪಾಯಿ ಟೊಪಿಗಿ :)
ಹೈಸ್ಕೂಲ್ ಪಂದ್ಯಾಟಕ್ಕಂತ ಬೆಳಗಾಲ್ ಪೇಟಿಗೆ ಹೋಗೋ ಮುಂದ ನೀ-ಕ್ಯಾಪ್ ಯಾಕ್ ಮರ್ತ್ನ್ಯೋ ಗೊತ್ತಿಲ್ಲ. ಮರ್ತಿದ್ದಂತು ಖರೆ. ಅಲ್ಲ, ಮರೀತೇನ್ ಅಂತ ಗೊತ್ತಿದ್ದಿದ್ರ ಮರೀತಿದ್ನೇನ್?
ಆಮ್ಯಾಲ, ಆ ಅಳಿಕೆ ಸಾಯಿ ಬಾಬಾ ಸಾಲಿಗೆ ಪರೀಕ್ಷಾ ಇದ್ದಾಗ್ ಟವೆಲ್ ಮರ್ತಿದ್ದೆ. ಹಂಗ ಪಿಯೂಸಿ ಆದ್ ಮ್ಯಾಲ ಹೊನ್ನಾವರದಾಗಿನ್ SDM ಕಾಲೇಜ್ ನಾಗಿನ್ ಪರೀಕ್ಷಾಕ್ ಹೋದಾಗ ಪೆನ್ ಮರ್ತಿದ್ದೆ. ಅಲ್ಲಿಂದ ಧಾರವಾಡ KCD ಎಂಟ್ರನ್ಸ್ ಫಾರ್ಮ್ ತುಂಬೋ ಮುಂದ ಫೋಟೂ ಮನ್ಯಾಗ ಬಿಟ್ಟಿದ್ದೆ. ಮನ್ಯಾಗ್ ಬಿಡೋದು, ಫೋಟೋ ನ ತಗಸ್ಕೊಂಡಿಲ್ಲ ಅನ್ನೋದಕ್ಕಿಂತ ಚೊಲೋ ಹೌದಿಲ್ಲೊ?
ಹೋಗ್ಗೋ ನಿನ್ನ, ICFAI ಎಂಟ್ರನ್ಸಿಗೆ ಅಂತ ಹೈದ್ರಾಬಾದಿಗೆ ಹೋದಾಗಂತೂ ಮಾರ್ಕ್ಸ್ ಕಾರ್ಡ್ ಜೆರಾಕ್ಸ್ ಮಾಡ್ಸೆ ಇರ್ಲಿಲ್ಲ.. ಆದ್ರ ಈ ಸರ್ತೆ ಫೋಟೋ ಮರ್ತಿರ್ಲಿಲ್ಲ. ಹೆ ಹೆ.
ಚೆನೈ ಬಿಟ್ ಬರೋ ಹೊತ್ತಿಗೆ ಒಂದೆರಡು ಪುಸ್ತಕ ಮರ್ತಿರ್ಬೌದು. ಹಂಗ, ಆ ಪ್ರೊಜೆಕ್ಟ್ ರಿಪೋರ್ಟ್ ಕೊಡೋ ದಿನ ಅದನ್ನ ಮರ್ತಿದ್ದೆ. ಮತ್ತ ಪ್ರಾಂಜಲ್ ಗ ಕಾಲ್ ಮಾಡಿ ತರ್ಸ್ಕೊಂಡೆ. ಆದ್ರ ಅವನ್ ನಂಬರ್ ಮರ್ತಿರ್ಲಿಲ್ಲ. ಖರೆ.
ದೀಪಾನ್ ಮದ್ವಿ. ಆ ಮಗಾ ವಿಕಾಸ್ ಗಡಿಬಿಡಿ ತಾ ಮಾಡಿ, ನನ್ನ ಮರ್ ಗೂಳಿ ಅಂತಾನ.. ಅಲ್ಲಾ, ಅವ ಗಡಿಬಿಡಿ ಮಾಡಿದ್ದಿಲ್ಲ ಅಂದ್ರ ನಾ ಯಾಕ್ ಉಡುಗೊರೆ ಮರೀತಿದ್ದೆ?
ದಿಲ್ಲಿಗೆ ಹೋದಾಗ ಸಂಜಿ ಚಾ ಕುಡಿಲಿಕ್ಕೆ ಅಂತ ಹೋದಾಗ ರೊಕ್ಕ ಮರ್ತಿದ್ದೆ. ಅಷ್ಟಕ್ಕ ಆ ಮಗ ಬಾಲಾ, ನನ್ನ ಕಂಜೂಸ್ ಅನ್ನೋದೇನ್? ಏನೋ ಚೊಲೋ ದೋಸ್ತ್ ಸಿಕ್ಕಾನ ಅಂತ ಸುಮ್ನಿದ್ದೆ.
ಕಡಿ ಸರ್ತಿ ಯಾವಾಗ್ ಮರ್ತಿದ್ದೆ? ನೆನಪಾಗ್ ವಲ್ದು. ಹಾಂ, ಇಲ್ಲಿ ಲಂಡನ್ನಿಗೆ ಬರೋ ದಿನ ಮನ್ಯಾಗ್ ಪರ್ಸ್ ಬಿಟ್ಟ್ ಬಿಟ್ಟಿದ್ದೆ. ಪಾಪ ಶರದ ಮತ್ತ ಏರ್ ಪೋರ್ಟಿಗೆ ಬಂದು ಕೊಟ್ಟಿದ್ದ...
ಹಿಂಗ ಸಣ್ಣ - ಪುಟ್ಟ ವಿಷ್ಯ ಮರಿಯೋದು ದೊಡ್ಡ ಅಪರಾಧ ಏನಲ್ಲ. ಮರಗೂಳಿ ಅಂತ ಕರ್ಸ್ಕೊಳ್ಳಿಕ್ಕೆ ಬೇರೆ ಲೆವೆಲ್ಲಿನ್ ಮರ್ವು ಬೇಕು ಅಂತ ನನ್ನ ಅನಿಸಿಕಿ. ಈಗ್ ನೋಡ್ರಿ, ಹೋದ್ ಡಿಸೆಂಬರ್ ನಿಂದ ಇದನ್ನ ಪೋಸ್ಟ್ ಮಾಡ್ಬೇಕಂತ ಅಂದ್ಕೊಂಡಿದ್ದೆ. ಸ್ವಲ್ಪ ಮರ್ತಿತ್ತು. ಇವತ್ತ ನೆನಪಾಗೇದ, ಮಾಡೇನಿ. ಅದಕ್ಕ ನನ್ನ ಮರಗೂಳಿ ಅನ್ನಬ್ಯಾಡ್ರ್ಯ ಮತ್ತ... ನಾ ಸುಮ್ನಿರೋ ಪೈಕಿ ಅಲ್ಲ.