Thursday 10 January 2008

ಏನೋ ಹೇಳಬೇಕೂಂತಿದ್ದೆ.... ಮರ್ತೇ ಹೋತು... :)

ನೀ ಬಿಡ್ಪಾ, ಕುಂತಲ್ಲೆ ಕುಂಡಿ ಮರೀತಿ... ನಾ ಸಣ್ಣವಿಂದ್ದಾಗಿಂದ್ಲು ಕೇಳ್ಕೊತ ಬಂದಿದ್ದಂದ್ರ ಇದ... ನನಗ ಮರೆಯೋ ಚಟ. ಹಂಗಂತ ’ದಾರಿ ತಪ್ಪ್ಪಿದ ಮಗ’ ಪಿಚ್ಚರ್ ನಾಗ್ ರಾಜ್ ಕುಮಾರ್ ಮರ್ತಂಗ ಚಡ್ಡಿ ಹಾಕೋದೆನೂ ಮರೀತಿರ್ಲಿಲ್ಲ.. ಸಾಲಿಗೆ ಹೋಗೋ ಮುಂದ ಪೆನ್ ಮರಿಯೋದು, ಗುಂಡಾ ಆಡ್ಲಿಕ್ಕೆ ಹೋಗಾಗ ಕಮ್ಮಿ ತೊಗೊಂಡ್ ಹೋಗೋದು, ಆಶಾ ಪಟ್ಟು ತೊಗೊಂಡಿದ್ದ್ ರಿಸ್ಟ್ ಬ್ಯಾಂಡ್ ಮರ್ತು ಕ್ರಿಕೆಟ್ ಆಡ್ಲಿಕ್ ಹೋಗೋದು, ಕಿರಾಣಿ ತರ್ಲಿಕ್ಕ್ ಹೋಗೋ ಮುಂದ ಎಲ್ಲಾ ಲಿಸ್ಟ್ ಮಾಡಿ, ಚೀಟಿ ಮರ್ತಿದ್ದು... ಹಿಂಗ ಸಣ್ಣ - ಪುಟ್ಟ. ಅಷ್ಟ..

ಹಂಗಂತ ಪರೀಕ್ಷಾಕ್ ಹಾಲ್ ಟಿಕೆಟ್, ರಾತ್ರಿ ಬಸ್ಸಿಗೆ ರಿಜರ್ವೇಶನ್ ಟಿಕೆಟ್, ಸಿನೆಮಾಕ್ಕ ರೊಕ್ಕ, ಟ್ಯುಶನ್ ಹೋಮ್ ವರ್ಕ್ - ಎಂದೂ ಮರ್ತಿಲ್ಲ. ಇಷ್ಟಕ್ಕ ನನ್ನ ಮರ್ ಗೂಳಿ ಅನ್ನೋದು ಸರಿಅಲ್ಲ ಅಂತ ನನಗನಸ್ತದ.

ಅಲ್ಲಾ, ಆ 6 ನೇತ್ತಾ ಇದ್ದಾಗ ಸ್ಕೌಟ್ಸ್ - ಗೈಡ್ಸ ರಾಲಿ ಆದಾಗ, ಆ ನೀಲಿ ಬಣ್ಣದ ಸ್ಕಾರ್ಫ್ ಮರ್ತಿದ್ದೆ, ಅದೂ ಕಡೀ ದಿನ.. ಪಾಟೀಲ್ ಮಾಸ್ತರು ಬೇರೆ ತಂದ್ ಕೊಟ್ರು - ಬಚಾವಾದೆ. ಆದ್ರೂ ಮಜಾ ಇತ್ತ್ ಅದು. ನಾ 6 ನೇತ್ತಾ, ಆದ್ರೂ ಲೀಡರ್ :). ಮಕ್ಳು - ಆ 7 ನೇತ್ತಾದವ್ರಿಗೆ ಮಸ್ತ್ ಹೊಡ್ಚಂಗಾಗಿತ್ತು.


ಅದ್ಕೂ ಮುಂಚಿನ್ ವರ್ಷ - 5 ನೇತ್ತಾದಾಗ್ - ಆ ನವೋದಯ ಪರೀಕ್ಷಾಕ್ಕಂತ ಫೋಟೋ ತಗಿಸ್ಕೋಬೇಕಾಗಿತ್ತು. ಹೋಗಿ ಹೋಗಿ ಕಿಶೇದಾಗ್ ಟೋಪನ್ ಇಲ್ದ ಬರೇ ಪೆನ್ ಇಟ್ಕೊಂಡ್ ಫೊಟೊ ತಗ್ಸ್ಕೊಂಡಿದ್ದಕ್ಕ ನಾ ಟೋಪನ್ ಮರ್ತಿದ್ದ ಕಾರಣ ಇರ್ಬೌದು- ಅದ್ರೂ ಅದೇನ್ ದೊಡ್ದ ಮರುವೇನ್?


ಕಾಕಾ ಹುಬ್ಬಳ್ಳ್ಯಾಗ್ ಮನಿ ಕಟ್ಸಿದ್ದ. ಗೃಹ ಪ್ರವೇಶಕ್ಕ್ ಹೋಗ್ಬೇಕಾದ್ರ ವಾರಗಟ್ಳೆ ಪ್ಯಾಕಿಂಗ್ ಮಾಡಿದ್ರು ಕೊನಿಗೆ ಬೆಲ್ಟ್ ಬಿಟ್ ಹೋದ್ಯಾ. ಅದಕ್ಕ ಮರಗೂಳಿ ಅನ್ನೊದೇನ್? (ಅಣ್ಣಗ್ ಮತ್ತೊಂದ್ 25 ರೂಪಾಯಿ ಟೊಪಿಗಿ :)

ಹೈಸ್ಕೂಲ್ ಪಂದ್ಯಾಟಕ್ಕಂತ ಬೆಳಗಾಲ್ ಪೇಟಿಗೆ ಹೋಗೋ ಮುಂದ ನೀ-ಕ್ಯಾಪ್ ಯಾಕ್ ಮರ್ತ್ನ್ಯೋ ಗೊತ್ತಿಲ್ಲ. ಮರ್ತಿದ್ದಂತು ಖರೆ. ಅಲ್ಲ, ಮರೀತೇನ್ ಅಂತ ಗೊತ್ತಿದ್ದಿದ್ರ ಮರೀತಿದ್ನೇನ್?


ಆಮ್ಯಾಲ, ಆ ಅಳಿಕೆ ಸಾಯಿ ಬಾಬಾ ಸಾಲಿಗೆ ಪರೀಕ್ಷಾ ಇದ್ದಾಗ್ ಟವೆಲ್ ಮರ್ತಿದ್ದೆ. ಹಂಗ ಪಿಯೂಸಿ ಆದ್ ಮ್ಯಾಲ ಹೊನ್ನಾವರದಾಗಿನ್ SDM ಕಾಲೇಜ್ ನಾಗಿನ್ ಪರೀಕ್ಷಾಕ್ ಹೋದಾಗ ಪೆನ್ ಮರ್ತಿದ್ದೆ. ಅಲ್ಲಿಂದ ಧಾರವಾಡ KCD ಎಂಟ್ರನ್ಸ್ ಫಾರ್ಮ್ ತುಂಬೋ ಮುಂದ ಫೋಟೂ ಮನ್ಯಾಗ ಬಿಟ್ಟಿದ್ದೆ. ಮನ್ಯಾಗ್ ಬಿಡೋದು, ಫೋಟೋ ನ ತಗಸ್ಕೊಂಡಿಲ್ಲ ಅನ್ನೋದಕ್ಕಿಂತ ಚೊಲೋ ಹೌದಿಲ್ಲೊ?


ಹೋಗ್ಗೋ ನಿನ್ನ, ICFAI ಎಂಟ್ರನ್ಸಿಗೆ ಅಂತ ಹೈದ್ರಾಬಾದಿಗೆ ಹೋದಾಗಂತೂ ಮಾರ್ಕ್ಸ್ ಕಾರ್ಡ್ ಜೆರಾಕ್ಸ್ ಮಾಡ್ಸೆ ಇರ್ಲಿಲ್ಲ.. ಆದ್ರ ಈ ಸರ್ತೆ ಫೋಟೋ ಮರ್ತಿರ್ಲಿಲ್ಲ. ಹೆ ಹೆ.


ಚೆನೈ ಬಿಟ್ ಬರೋ ಹೊತ್ತಿಗೆ ಒಂದೆರಡು ಪುಸ್ತಕ ಮರ್ತಿರ್ಬೌದು. ಹಂಗ, ಆ ಪ್ರೊಜೆಕ್ಟ್ ರಿಪೋರ್ಟ್ ಕೊಡೋ ದಿನ ಅದನ್ನ ಮರ್ತಿದ್ದೆ. ಮತ್ತ ಪ್ರಾಂಜಲ್ ಗ ಕಾಲ್ ಮಾಡಿ ತರ್ಸ್ಕೊಂಡೆ. ಆದ್ರ ಅವನ್ ನಂಬರ್ ಮರ್ತಿರ್ಲಿಲ್ಲ. ಖರೆ.

ದೀಪಾನ್ ಮದ್ವಿ. ಆ ಮಗಾ ವಿಕಾಸ್ ಗಡಿಬಿಡಿ ತಾ ಮಾಡಿ, ನನ್ನ ಮರ್ ಗೂಳಿ ಅಂತಾನ.. ಅಲ್ಲಾ, ಅವ ಗಡಿಬಿಡಿ ಮಾಡಿದ್ದಿಲ್ಲ ಅಂದ್ರ ನಾ ಯಾಕ್ ಉಡುಗೊರೆ ಮರೀತಿದ್ದೆ?

ದಿಲ್ಲಿಗೆ ಹೋದಾಗ ಸಂಜಿ ಚಾ ಕುಡಿಲಿಕ್ಕೆ ಅಂತ ಹೋದಾಗ ರೊಕ್ಕ ಮರ್ತಿದ್ದೆ. ಅಷ್ಟಕ್ಕ ಆ ಮಗ ಬಾಲಾ, ನನ್ನ ಕಂಜೂಸ್ ಅನ್ನೋದೇನ್? ಏನೋ ಚೊಲೋ ದೋಸ್ತ್ ಸಿಕ್ಕಾನ ಅಂತ ಸುಮ್ನಿದ್ದೆ.

ಕಡಿ ಸರ್ತಿ ಯಾವಾಗ್ ಮರ್ತಿದ್ದೆ? ನೆನಪಾಗ್ ವಲ್ದು. ಹಾಂ, ಇಲ್ಲಿ ಲಂಡನ್ನಿಗೆ ಬರೋ ದಿನ ಮನ್ಯಾಗ್ ಪರ್ಸ್ ಬಿಟ್ಟ್ ಬಿಟ್ಟಿದ್ದೆ. ಪಾಪ ಶರದ ಮತ್ತ ಏರ್ ಪೋರ್ಟಿಗೆ ಬಂದು ಕೊಟ್ಟಿದ್ದ...

ಹಿಂಗ ಸಣ್ಣ - ಪುಟ್ಟ ವಿಷ್ಯ ಮರಿಯೋದು ದೊಡ್ಡ ಅಪರಾಧ ಏನಲ್ಲ. ಮರಗೂಳಿ ಅಂತ ಕರ್ಸ್ಕೊಳ್ಳಿಕ್ಕೆ ಬೇರೆ ಲೆವೆಲ್ಲಿನ್ ಮರ್ವು ಬೇಕು ಅಂತ ನನ್ನ ಅನಿಸಿಕಿ. ಈಗ್ ನೋಡ್ರಿ, ಹೋದ್ ಡಿಸೆಂಬರ್ ನಿಂದ ಇದನ್ನ ಪೋಸ್ಟ್ ಮಾಡ್ಬೇಕಂತ ಅಂದ್ಕೊಂಡಿದ್ದೆ. ಸ್ವಲ್ಪ ಮರ್ತಿತ್ತು. ಇವತ್ತ ನೆನಪಾಗೇದ, ಮಾಡೇನಿ. ಅದಕ್ಕ ನನ್ನ ಮರಗೂಳಿ ಅನ್ನಬ್ಯಾಡ್ರ್ಯ ಮತ್ತ... ನಾ ಸುಮ್ನಿರೋ ಪೈಕಿ ಅಲ್ಲ.

1 comment:

Unknown said...

hey sakkathagi bardidya kano...... aadru innu keluvondu vishayagalanna marthidiya antha ansuthe...... hogli bidu eega bardirode saaku.....

Its not ur mistake either, i agree.... ella tension inda ne agodu ishtondu marevu......