


ವಿಂಡ್ಸರ್ ನಲ್ಲಿರೋ ಈ ರಾಜರ ವಿಶ್ರಾಂತಿತಾಣದ ಮುಖ್ಯ ಆಕರ್ಷಣೆಯೆಂದರೆ ಗೋಲಾಕಾರವಾಗಿರುವ ಮಧ್ಯ ಸೌಧ. ಇಂದಿಗೂ ರಾಣಿಯ ಅಧಿಕೃತ ನಿವಾಸವಾಗಿರುವ ಈ ಕೋಟೆ ಸುಮಾರು ೧೦ ಶತಮಾನಗಳ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ. ಈ ಸಾವಿರ ವರ್ಷಗಳಲ್ಲಿ ಹಲವಾರು ಬಾರಿ ಬದಲಾವಣೆ ಕಂಡಿರುವ ಈ ಕೋಟೆ, ತನ್ನ ಸೌಂದರ್ಯವನ್ನೇನು ಕಳೆದುಕೊಂಡಿಲ್ಲ. ಗೋಲಾಕಾರದ ಮಧ್ಯ ಸೌಧವನ್ನು ರಕ್ಷಣೆಗೆಂದು ಕಟ್ಟಿಸಿದ್ದೆಂದು ಪ್ರತೀತಿ. ಈ ಮಧ್ಯ ಸೌಧವನ್ನು ದಾಟಿದರೆ ಕೋಟೆಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿದ್ದಾರೆ. ಮೇಲ್ಭಾಗದಲ್ಲಿ ರಾಜವಂಶದ ಖಾಸಗಿ ಕೋಣೆಗಳು, ರಾಜರುಗಳ ಅಧಿಕೃತ ಭೇಟಿಗೆಂದೇ ನಿರ್ಮಿಸಲ್ಪಟ್ಟಿರುವ ಕೋಣೆಗಳು, ವಿಹರಿಸಲು ಕಾಲ್ದಾರಿ, ಉದ್ಯಾನವನ ಮತ್ತು ಆಳುಗಳ ಕೋಣೆಗಳಿವೆ. ಗೋಲಾಕಾರದ ಮಧ್ಯ ಸೌಧ ಎರಡನೇ ವಿಭಾಗದಲ್ಲಿದೆ. ಇದರ ಕೆಳ ವಿಭಾಗದಲ್ಲಿ ಸೈನಿಕರ ಕೋಣೆಗಳು, ಒಂದು ಚರ್ಚ್ ಮತ್ತು ಪಹರೆ ನೀಡಲು ಸಹಾಯವಾಗುವಂತೆ ನಿರ್ಮಿಸಿದ ಸೌಧಗಳಿವೆ.
ಈ ಕೋಟೆ ವಿಶ್ರಾಂತಿ ತಾಣವಾದ್ದರಿಂದ ಭೇಟಿಗಳಿಗೆಂದು ಮೀಸಲಾಗಿದ್ದ ಕೋಣೆಗಳನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ವಿವಿಧ ಕಾಲಮಾನಗಳಲ್ಲಿ ಗೆದ್ದ, ಇಲ್ಲವೇ ಕಾಣಿಕೆಯಾಗಿ ಪಡೆದ ಅಪರೂಪದ ವಸ್ತುಗಳನ್ನ ಪ್ರದರ್ಶನಕ್ಕಿಡಲಾಗಿದೆ. ಅತಿ ಮುಖ್ಯವಾದದ್ದು - ಟಿಪ್ಪೂವಿನ ಕಿರೀಟ, ಖಡ್ಗ ಮತ್ತು ಯುದ್ಧವಸ್ತ್ರ. ಜೊತೆಗೆ ಟಿಪ್ಪೂವಿನ ಸಿಂಹಾಸನದಲ್ಲಿದ್ದ ಪೂರ್ಣವಾಗಿ ಬಂಗಾರದಲ್ಲಿ ನಿರ್ಮಿತ ಹುಲಿ. ಮೀರ್ ಸಾದಿಕ್ ನ ಮೇಲಿನ ಸಿಟ್ಟು ದುಪ್ಪಟ್ಟಾಯಿತು!!! ಹೀಗೇಕೆ ನಮ್ಮವರೇ ಕೈ ಕೊಡ್ತಾರೆ?
ಥಾಯ್ ಲ್ಯಾಂಡ ನ ವಜ್ರಖಚಿತ ಖಡ್ಗ, ಕೆರಿಬಿಯನ್ ದ್ವೀಪಗಳ ಖಡ್ಗಗಳು, ಸಾವಿರಾರು ಬಂದೂಕುಗಳು, ಅಷ್ಟೇ ಖಡ್ಗಗಳು, ವಿವಿಧ ವಿನ್ಯಾಸದ ಸಿಂಹಾಸನಗಳು, ಅಸ್ತ್ರಗಳನ್ನು ನೋಡಿದರೂ ಕೊನೆಗೆ ನೆನಪಿನಲ್ಲಿಳುದಿದ್ದು ಟಿಪ್ಪೂವಿನ ಆ ಕಿರೀಟ ಮತ್ತು ಬಂಗಾರದ ಹುಲಿ!! ಆಳಿದವರ ಮನೆಯಲ್ಲಿ ಆಳಿಸಿಕೊಂಡವರ ಸ್ವಾತಂತ್ರ್ಯದ ಹೋರಾಟದ ಕುರುಹುಗಳು!! ಮನಸ್ಸೇಕೋ ಸ್ವ್ಲಲ್ಪ ಅಲುಗಾಡಿತು.
ಈ ಹೊಯ್ದಾಟಗಳಲ್ಲೇ ಅಪಾರ್ಟ್ ಮೆಂಟ್ ಸುತ್ತು ಮುಗಿಸಿ ಕೋಟೆಯ ಕೆಳಭಾಗಕ್ಕೆ ಬಂದಿದ್ದೆವು. ಚರ್ಚ್ ನಲ್ಲಿ ಪ್ರವೇಶವಿರಲಿಲ್ಲ. ಕೆಳಭಾಗದ ಪ್ರಾಕಾರದ ಬಳಿ ಒಂದೈವತ್ತು ಫೋಟೋ ಕ್ಲಿಕ್ಕಿಸಿ ಮತ್ತೊಮ್ಮೆ ಸೂರ್ಯ ಪ್ರಕಾಶದಲ್ಲಿ ಆ ಭದ್ರ ಕೋಟೆಯ ಸೌಂದರ್ಯ ಸವಿದು, ಸೆರೆ ಹಿಡಿದು ಹೊರಬಂದಾಗ ಹೊಟ್ಟೆ ತಾನೂ ಬಂದಿದ್ದೇನೆ ಎಂದೆಚ್ಚರಿಸಿತ್ತು! ಪಿಜ್ಜಾ ಹಟ್ ನಲ್ಲಿ ಪಿಜ್ಜಾ ತಿಂದು ಬಸ್ ಗಾಗಿ ಕಾಯಲು ಹೊರಟಾಗ ನಾಲ್ಕೂವರೆ. ಐದು ಗಂಟೆಗೆ ಲಂಡನ್ನಿಗೆ ಬಸ್ಸಿತ್ತು. ಸರಿ ಹೇಗೂ ಟೈಮಿದೆಯಲ್ಲ ಅಂದು ಅಲ್ಲೇ ಎದುರಿಗಿದ್ದ ಪ್ಯಾರಿಶ್ ಚರ್ಚ್ ನೊಳಕ್ಕೆ ಹೊಕ್ಕಿದ್ದಾಯಿತು. ಬ್ರಿಟಿಶ್ ರಿಗೆ ತಮ್ಮ ಇತಿಹಾಸದ ಮೇಲೆ ಇನ್ನಿಲ್ಲದ ಪ್ರೀತಿಯ ಸಂಕೇತವಾಗಿ ಆ ಚರ್ಚ್ ನ ಕಿಟಕಿಗಳಲ್ಲಿ ಮುದ್ರಿಸಿದ್ದ ’೧೭೨೦ ರಲ್ಲಿ ಮೃತರಾದ ಇಂತಿಂಥವರ ಪತ್ನಿ ನೀಡಿದ ನೆನಪಿನ ಕಾಣಿಕೆ’ ಎಂಬತಹ ಬರಹಗಳು ’ಹೇ, ನೀನೂ ಸ್ವಲ್ಪ ಕಲಿ’ ಎನ್ನುವಂತಿದ್ದವು.
ಇಷ್ಟೆಲ್ಲ ತಿರುಗಾಡಿದ ಮೇಲೆ ಕಾಲು ಮಾತಾಡತೊಡಗಿ ಬಾಯಿ ಮುಚ್ಚಿಸಿದ್ದವು! ತಲೆಯಲ್ಲಿ ಇವೇ ವಿಚಾರಗಳ ಸುಳಿಯಲ್ಲಿ ಮುಳುಗಿದವನಿಗೆ ಲಂಡನ್ ಬಂದಾಗಲೇ ಎಚ್ಚರ!! ಪ್ರತಿ ಪ್ರವಾಸದ ತಿರು-ಪ್ರಯಾಣವೂ ಹೀಗೆಯೇ!! ಮರುದಿನ ಬೆಳಿಗ್ಗೆ ಮತ್ತದೇ ಆಫೀಸ್, ಅದೇ ಅಂಡರ್ ಗ್ರೌಂಡ್, ಅದೇ ಸೆಂಟ್ರಲ್ ಲೈನ್. ಆದರೆ ಈ ಕೋಟೆಗೆ ಇತ್ತ ಭೇಟಿ ಉತ್ಸಾಹ ತುಂಬಿತ್ತು. ಹಿಂದೆ ಒಮ್ಮೆ ನೋಡಿ ಮುಂದಡಿಯಿಡಿಸಿತ್ತು.