Monday 20 July 2009

ದೇವರಿಗೇಕೆ ಸೀಮೆ?

ಕಳೆದ ವಾರ ಬರ್ಮಿಂಗ್ ಹ್ಯಾಮ್ - ಬ್ಲ್ಯಾಕ್ ಪೂಲ್ ತಿರುಗಾಡಲೆಂದು ಹೋಗಿದ್ದೆ. ಅಲ್ಲಿನ ಬಾಲಾಜಿ ದೇವಸ್ಥಾನದ ಬಗ್ಗೆ ಇನ್ನೊಮ್ಮೆ ಗೀಚುವೆ. ಆದರೆ ಆ ದೇವಸ್ಥಾನದಲ್ಲಿ ನೋಡಿದ, ಅನುಭವಿಸಿದ ಒಂದು ವಿಷ್ಯದ ಬಗ್ಗೆ ಬರೀ ಬೇಕೆನಿಸಿತು.

ಗೆಳೆಯರೊಂದಿಗೆ ಕಾರಲ್ಲಿ ಗುಡಿ ತಲುಪಿದಾಗ ೧೧ ರ ಸಮಯ. ಜೊತೆಯಲ್ಲಿದ್ದವರೆಲ್ಲ ಉತ್ತರ ಭಾರತೀಯರು. ತುಂಬ ಚಂದದ ಗುಡಿ ಕಟ್ಟಿ ಕೊಂಡಿದ್ದಾರೆ ಇಲ್ಲಿನ ಭಾರತೀಯರು. ಅಲ್ಲಿದ್ದವರಲ್ಲಿ ಬಹುಪಾಲು ದಕ್ಷಿಣದವರೇ. ಜೊತೆಯಲ್ಲಿದ್ದ ಸಾರ್ಥಕ್ ನಿಗೆ ಒಂದೇ ವಿಸ್ಮಯ. ಪೂಜಾರಿಯೇಕೆ ಅರೆ ಬೆತ್ತಲು? ದಕ್ಷಿಣದಲ್ಲೇಕೆ ಈ ಥರ ಪೂಜಿಸುತ್ತಾರೆ? ದಕ್ಷಿಣದಲ್ಲಿನ ಪ್ರಸಿದ್ಧ ದೇವರು ಯಾವುದು? ಹೀಗೆ ಮುಂದುವರೆದಿತ್ತು ಅವನ ಪ್ರಶ್ನಾವಳಿ. ನನ್ನ ತಿಳುವಳಿಕೆಗೆ ತಕ್ಕ ಉತ್ತರ ಕೊಟ್ಟು ಮುಂದುವರೆದೆ. ಪ್ರಸಾದದ ಸಮಯದಲ್ಲಿ ನೆರೆದ ಗುಂಪಿನಲ್ಲು ಅದೇ ವಿಷಯ ಪ್ರಸ್ತಾಪವಾಯಿತು. ಅಲ್ಲಿ ಪೂಜಾವಿಧಿಯ ವಿವರಣೆ ಮತ್ತು ಅದರ ಹೋಲಿಕೆ ದಕ್ಷಿಣದೊಂದಿಗೆ. ಬರಿ ಮಂಡಿಯೂರಿ ನಮಸ್ಕರಿಸುವ ಅವರಿಗೆ ನನ್ನ ಸಾಷ್ಟಾಂಗ ನಮಸ್ಕ್ಯಾರ ಕಂಡು ಸ್ವಲ್ಪ ಆಶ್ಚರ್ಯವುಂಟಾಗಿತ್ತು. ಹಮಾರೆ ಯಹಾಂ ಐಸಾ ನಹಿ ಹೋತಾ ಹೈ... ಹಾಗೆ ಹೀಗೆ....

ಅದು ಅವರು ಹುಟ್ಟಿ ಬೆಳೆದ ಪ್ರದೇಶದ ರೀತಿಯೆಂದು ಸುಮ್ಮನಾಗಿ ನಮ್ಮ ಮುಂದಿನ ದಾರಿ ಹಿಡಿದು ಹೊರಟೆವು. ಹೋಗಿದ್ದು ಬ್ರಿಟನ್ ನಲ್ಲೇ ದೊಡ್ಡದಾದ ಗುರುದ್ವಾರಕ್ಕೆ. ಅಲ್ಲಿನ ಪೂಜಾವಿಧಿ ನೋಡಿ ಮತ್ತದೇ ಚರ್ಚೆ ಶುರುವಾಯಿತು. ಇಲ್ಲಿ ನಮಸ್ಕರಿಸುವ ರೀತಿ, ತಲೆ ಮೇಲೆ ಕಡ್ಡಾಯವಾಗಿ ಬಟ್ಟೆ ಧರಿಸಬೇಕೆಂಬ ನಿಯಮ, ಸಾಮೂಹಿಕ ಊಟ, ಹೆಂಗಸರಿಗೆ ಪ್ರತ್ಯೇಕ ಸ್ಥಳ ಮುಂತಾದ ವಿಷಯಗಳು ಚರ್ಚಿತವಾದವು.

ಇವು ಬರಿ ಚರ್ಚೆಯ ವಿಷಯಗಳಾಗಿದ್ದರೆ, ಮತ್ತು ಒಬ್ಬಿಬ್ಬರು ಈ ಥರ ಅಂದುಕೊಂಡಿದ್ದರೆ ವಯಕ್ತಿಕ ವಿಚಾರ ಎಂದು ಬಿಟ್ಟು ಬಿಡುತ್ತಿದ್ದೆ. ಆದರೆ ಇರುವ ಬಹುಪಾಲು ಉತ್ತರ ಭಾರತೀಯ ಗೆಳೆಯರು ಈ ಥರದ ಪ್ರಶ್ನೆ ಕೇಳಿದ್ದರು. ನನಗೆ ದಕ್ಷಿಣದ ದೇವರು-ದೇವಸ್ಥಾನ ಇಷ್ಟ ಇಲ್ಲ ಎಂದು ನೇರವಾಗಿ ಹೇಳದಿದ್ದರೂ (ದೇವರೆಂಬ ಭಯಕ್ಕೆ!!), ದಕ್ಷಿಣದವರಷ್ಟೇ ಅವರ ದೇವರೂ ನಮಗೆ ಹೊಂದಿಕೆಯಾಗಲ್ಲ ಅನ್ನುವಷ್ಟರ ಮಟ್ಟಿಗೆ ಭಾವನೆ ವ್ಯಕ್ತವಾಗಿತ್ತು.

ಹೀಗೇಕೆ ದೇವರಿಗೆ ಸೀಮೆಯ ಮೀಸಲಾತಿ? ಎಲ್ಲೇ ಹೋದರೂ ದೇವರು ದೇವರಲ್ಲವೇ?

ಈ ಜಗತ್ತನ್ನು ಅವನ ಕೃತಿಯೆಂದು ನಂಬಿದರೆ, ಈ ವಿರೋಧಾಭಾಸವೂ ಅವನದೇ ರಚನೆಯಂಬುದನ್ನೂ ನಂಬಬೇಕೆನಿಸುತ್ತದೆ. ಕೆಂಡಸಂಪಿಗೆಯಲ್ಲಿ ಓದಿ ತಿಳಿದ, ಇತ್ತೀಚಿಗೆ ಬಹುಪ್ರಭಾವಿತನಾಗಿರುವ, ನುಸ್ರತ್ ಫತೇ ಅಲಿ ಖಾನ್ ಅವರ ಗಾಯನದಲ್ಲಿರುವ ಒಂದು ಚೀಜ್ (ಕವ್ವಾಲಿ) ನೆನಪಿಗೆ ಬರುತ್ತಿದೆ. ’ತುಮ್ ಇಕ್ ಗೋರಖ್ ಧಂಧಾ ಹೋ’. ದೇವರನ್ನು ಅವನೇ ಸೃಷ್ಟಿ ಮಾಡಿರುವ ವಿರೋಧಾಭಾಸಕ್ಕೆ ಜರೆಯುತ್ತ ಅವನನ್ನು ಪ್ರಶಂಸಿವುವ ಈ ಚೀಜ್ ನ ಭಾವನೆ ಎಷ್ಟು ಸರಿಯಾಗಿದೆಯಲ್ಲವೇ?

No comments: