Monday 12 October 2009

ಕೊನೆ ಎರಡು ವಾರಗಳು...

ಜನೆವರಿಯಿಂದ ರಿಲೀಸ್ ಕೇಳುತ್ತಿದ್ದೆ. ರಿಸೆಷನ್ ಎಲ್ಲೆಡೆ ತನ್ನ ಪ್ರಭಾವ ಬೀರಿದ್ದರೂ ನನ್ನ ಟೀಮಿನಲ್ಲಿ ನಾನೇ ರಾಜ! ಯಾರೂ ಬರಲೊಪ್ಪದ ಇಲ್ಲಿನ ಟೀಮ್ ಸೇರಿ ಸಮರ್ಥವಾಗಿ (? :) ) ಕೆಲಸ ನಿಭಾಯಿಸಿದ್ದಕ್ಕೋ, ನಾನು ಹೇಳಿದ್ದನ್ನು ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಮ್ಯಾನೇಜರ್ ಇರಲಿಲ್ಲ. ಸರಿ, ಟೀಮ್ ನಲ್ಲೇ ಉಳಿಬೇಕಾದರೆ ಉಳಿದಿದ್ದೊಂದೆ ದಾರಿ -ವಾಪಸ್ ಅಮೇರಿಕದ ಹಾದಿ ಹಿಡಿಯಬೇಕು. ಬಂದ ದಿನದಿಂದಲೂ ಲಂಡನ್ ಹಿಡಿಸಿರಲಿಲ್ಲ - ಹವಾಮಾನ ಒಂದು ಕಡೆ, ಮೂರೇ ಜನರ ಟೀಮ್ ನಲ್ಲಿ ಕೆಲಸದ ಜೊತೆಗೆ ೮೦ ಲಕ್ಷ ಜನರಿರುವ ಊರಲ್ಲಿ ಪರಿಚಯದವರಿಲ್ಲದಿರುವುದೂ ಕಾರಣವಾಗಿತ್ತು. ಸರಿ ಮೇನಲ್ಲಿ ವಾಪಸ್ ಹೋಗುವುದೆಂದು ನಿಶ್ಚಯವಾಯಿತು. ಆದರೆ ರಿಸೆಷನ್ ತನ್ನ ಪ್ರಭಾವ ಬೀರೇ ಬಿಟ್ಟಿತ್ತು. ಬಜೆಟ್ ಇಲ್ಲ ಎಂಬ ಕಾರಣದಿಂದ ನನ್ನ ಅಮೆರಿಕ ಪ್ರಯಾಣ ರದ್ದಾಯಿತು. ಆದರೆ ಅದರ ಜೊತೆಗೆ ಒಂದು ಆಶಾಕಿರಣವೂ ಬೆಳೆಗಿತು!! ಮ್ಯಾನೇಜರ್ ತಾನಾಗೇ ನನ್ನ ಮುಂದಿನ ಪ್ಲ್ಯಾನ್ ಕೇಳಿದಾಗ ಊರಿಗೆ ಮರಳುವ ಪ್ರಸ್ತಾಪ ಮುಂದಿಟ್ಟೆ. ಒಪ್ಪಿಗೆ ಸಿಕ್ಕಿತ್ತು. ಜುಲೈ ಕೊನೆಗೆ ಹೋಗುವುದು ಪಾಸಿಬಲ್ ಅನ್ನಿಸಿತ್ತು. ಆದರೆ ಮ್ಯಾನೇಜರ್ ಸೆಪ್ಟೆಂಬರ್ ಕೊನೆಗೆ ಎಂದ. ಸರಿ, ಇನ್ನೇನು ಎರಡು ತಿಂಗಳ ಮಾತೇ ತಾನೆ ಎಂದು ಸರಿ ಎಂದಿದ್ದೆ.

ಮಧ್ಯೆ ಮತ್ತೇನೋ ಬಂದು ಕೊನೆಗೆ ಅಕ್ಟೋಬರ್ ಕೊನೆ ಎಂದಾಗ ಮತ್ತಷ್ಟು ಗಟ್ಟಿ ಮಾಡಿ ಸರಿ ಎಂದೆ. ಇನ್ನೇನು ಎರಡು ವಾರಕ್ಕೆ ಮರಳುತ್ತಿರುವೆ. ಅದೇಕೋ ಅಮೆರಿಕೆಯಿಂದ ಹೊರಟ ಸಮಯ ನೆನಪಿಗೆ ಬಂತು.
ಮೇ ೦೭ ನಲ್ಲಿ ಅದೇ ತಾನೆ ಅಣ್ಣನ ಮದುವೆ ಮುಗಿಸಿ ಮರಳಿ ಅಮೇರಿಕಕ್ಕೆ ತೆರೆಳಿದ್ದೆ. ಇನ್ನೂ ಬಂದು ಒಂದು ವಾರ ಆಗಿರಲಿಲ್ಲ, ಮ್ಯಾನೇಜರ್ ಕರೆದರು. ಅದೇ ತಾನೆ ಕಾಸ್ಟ್ ಕಟಿಂಗ್ ಎಂದು ಹತ್ತಿಪ್ಪತ್ತು ಪರ್ಸೆಂಟ್ ಜನರನ್ನ ಹೊರಗೆ ಕಳಿಸಿದ್ದರು. ನನ್ನ ಟೀಮ್ ಬೇರೆ ಬದಲಾಯಿಸಿದ್ದರು. ಇದೇನಪ್ಪ ಈಗ ಮತ್ತೊಮ್ಮೆ ಮೀಟಿಂಗ್ ಎಂದು ಹೋದರೆ, ಪಾಸ್ ಪೋರ್ಟ್ ಮತ್ತೆ ಇತರೆ ದಾಖಲೆ ಕಳಿಸಲು ಹೇಳಿದರು. ಯಾಕೆ ಎನ್ನಲು, ಲಂಡನ್ ನಲ್ಲಿರುವ ಟೀಮಿಗೆ ನಿನ್ನ ಅವಶ್ಯಕತೆ ಇದೆ, ಇನ್ನೊಂದು ತಿಂಗಳಲ್ಲಿ ಹೊರಡಬೇಕು ಎಂದಾಗ, ಸ್ವಲ್ಪ ಖುಷಿ, ಸ್ವಲ್ಪ ಕಸಿವಿಸಿಯಾಗಿತ್ತು. ಎರಡೇ ತಿಂಗಳಿಗೆ ಮತ್ತೆ ಊರಿಗೆ ಬರುವ ಅವಕಾಶ ಒಂದು ಕಡೆ ಆದರೆ, ತಿಳವಳ್ಳಿಯ ತರಹವೇ ಇದ್ದ ಆ ಊರನ್ನು ಮತ್ತು ಉಳಿದ ಸವಲತ್ತುಗಳನ್ನು ಬಿಟ್ಟು ಬರಬೇಕೆನ್ನುವ ನಿರಾಶೆ ಇನ್ನೊಂದು ಕಡೆ. ಈ ದ್ವಂದ್ವದಲ್ಲೇ ಒಂದು ತಿಂಗಳು ಕಳೆದದ್ದು ಗೊತ್ತೆ ಆಗಲಿಲ್ಲ. ಯುಕೆ ವೀಸಾ, ಪ್ಯಾಕಿಂಗಿನಲ್ಲಿ, ಬೇಸಿಗೆಯ ತಿರುಗಾಟದಲ್ಲಿ ಮತ್ತು ಪಾರ್ಟಿಗಳಲ್ಲಿ ಸಮಯ ಉರುಳಿ ಹೋಗಿತ್ತು!!

ಆದರೆ ಈ ಸರ್ತಿ ಯಾಕೋ ಸಮಯವೇ ಚಲಿಸುತ್ತಿಲ್ಲ ಅನಿಸುತ್ತಿದೆ. ಟಿಕೆಟ್ ಬುಕ್ಕಾಗಿದೆ. ಅಕ್ಟೋಬರ್ 25 ಕ್ಕೆ ಪಿಕ್ ಮಾಡಲು ಗೆಳೆಯರು ಬರುವುದೂ ನಿಗದಿಯಾಗಿದೆ. ಅಣ್ಣ ನೋಡಲು ಕೆಲ (ಪ್ರಾಸ್ಪೆಕ್ಟಿವ್) ಹುಡುಗಿಯರ ಲಿಸ್ಟ್ ಅನ್ನೂ ರೆಡಿ ಮಾಡಿದ್ದಾಗಿದೆ. ಆದರೆ ಉಳಿದಿರುವ ಈ ಎರಡು-ಮೂರು ವಾರಗಳನ್ನು ಇಲ್ಲಿ ಕಳೆಯುವ ಕಷ್ಟ ಮಾತ್ರ ಹೇಳತೀರದು. ದೊಡ್ಡ ಅತ್ತಿಗೆಯ ಡೆಲಿವರಿ ಡೇಟ್ ಹತ್ತಿರ ಬಂದಿದೆ. ಇಬ್ಬರಲ್ಲಿ ಯಾರ ನಿರೀಕ್ಷೆ ಹೆಚ್ಚು ಕಷ್ಟಕರ ಎಂದು ಹೇಳುವುದು ಕಷ್ಟಕರ!!

ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಕೆರೆದುಕೊಳ್ಳಲೂ ಸಮಯವಿಲ್ಲದ ದಿನಗಳಿದ್ದ ಈ 2 ವರ್ಷಗಳು ಒಂದು ಕಡೆಯಾದರೆ ಈ ಮೂರು ವಾರಗಳು ಇನ್ನೊಂದು ತೂಕವೇ. ಆಫೀಸಿನಲ್ಲೂ ಕೆಲ್ಸ ಕಡಿಮೆ. ಇನ್ನೇನು ಹೋಗುವವ, ಹೀಗಾಗಿ ಇಲ್ಲಿರುವುವರು ಮಾಡಲಿ ಎಂದು ಇರುವ ಕೆಲ್ಸವನ್ನೂ ಮಾಡಲು ಬಿಡದ ನನ್ನ ಟೀಮ್, ನನ್ನ ಇಲ್ಲಿನ 2 ವರ್ಷಗಳ ಬಗ್ಗೆ ಯೋಚಿಸುವಂತೆ ಮಾಡುತ್ತಿದೆ.

ಊರ ತುಂಬ ಜನರಿದ್ದರೂ ಸ್ನೇಹಿತರಿಲ್ಲದಿರುವುದು, ಇರುವ ಕೆಲವರ ನಡುವೆಯೂ ಒಂಟಿಯಾಗಿರುವ ಗೋಳನ್ನು ಕಲಿಸಿದೆ ಈ ಲಂಡನ್. ಅದರ ಜೊತೆಗೇ ನನ್ನನ್ನ ಗಟ್ಟಿಯಾಗಿಸಿಯೂ ಇದೆ. ಹೊಸ ಗೆಳೆಯರನ್ನು ಕೊಟ್ಟಿದೆ. ಬರೆಯಲು ಪ್ರೇರೇಪಿಸಿದೆ. ಓದಿಸಿದೆ. ಕೆಲ್ಸ ಕಲಿಸಿದೆ. ಅಗತ್ಯವಾಗಿದ್ದ ಹಣಕಾಸು ಒದಗಿಸಿದೆ. ಅತಿಯಾಗಿ ಪ್ರೀತಿಸುತ್ತಿದ್ದೆ ಮಳೆಯ ಬಗ್ಗೆ ಬೇಸರ ಮೂಡಿಸಿದೆ. ಅಪರೂಪವಾಗುವ ಸೂರ್ಯನ ಬಗ್ಗೆ ಕುತೂಹಲ ಮೂಡಿಸಿದೆ. ಜೀವನದ ಮೊದಲ ಕ್ರಿಕೆಟ್ ಮ್ಯಾಚ್ ತೋರಿಸಿದೆ, ಅದೂ ಭಾರತ-ಪಾಕ್ ನಡುವೆ. ವೃತ್ತಿಯನ್ನು ರೂಪಿಸಿದೆ.

ತಿರುಗಿ ನೋಡಿದರೆ eventful ಆಗಿದ್ದ ನನ್ನ ಲಂಡನ್ ವಾಸ ಇನ್ನೇನು ಮುಗಿಯಲಿದೆ. ಆದರೆ ಬಂದಾಗಿದ್ದವನಿಗಿಂತ ಬದಲಾಗಿ (ಒಳ್ಳೆಯದಕ್ಕೆ) ಮರಳುತ್ತಿದ್ದೇನೆಂಬ ಸಮಾಧಾನದಿಂದ ಲಂಡನ್ನಿಗೆ ಒಂದು ಸಲಾಮ್!!

2 comments:

Rohini said...

:) :)

Keshav.Kulkarni said...

wish you all the best, Aroon.
- Keshav